ಬೀದರ್: ನಾರಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಡೀಸೆಲ್ ಕೊರತೆಯಿಂದ ಬಸ್ಗಳ ಸಂಚಾರಕ್ಕೆ ತೊಂದರೆಯಾಗಿದ್ದರೆ, ಇದೀಗ ಪ್ರಯಾಣಿಕರಿಗೆ ಟಿಕೆಟ್ ನೀಡಲು ಬಳಸುವ ಟಿಕೆಟ್ ರೋಲ್ಗಳ ಕೊರತೆಯೂ ಎದುರಾಗಿದೆ.
ಬೀದರ್ನಿಂದ ಕಲಬುರಗಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬಸ್ಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ ಪ್ರತ್ಯೇಕ ಟಿಕೆಟ್ ನೀಡುವ ಬದಲು, ಇಬ್ಬರು ಅಥವಾ ಮೂವರು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಟಿಕೆಟ್ ರೋಲ್ಗಳ ಕೊರತೆಯಿಂದ ಕಂಡಕ್ಟರ್ಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಗತ್ಯವಿರುವ ಟಿಕೆಟ್ ರೋಲ್ಗಳನ್ನು ಹೊಂದಿರುವ ಇತರ ಕಂಡಕ್ಟರ್ಗಳಿಂದ ಪಡೆದು ಪ್ರಯಾಣಿಕರಿಗೆ ಟಿಕೆಟ್ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಬಾಕಿ ಹಣ ಪಾವತಿಯಾಗದ ಕಾರಣ ಡೀಸೆಲ್ ಕೊರತೆ ಎದುರಾಗಿ ಬಸ್ ಸೇವೆಗೆ ಅಡಚಣೆಯಾಗಿತ್ತು ಎನ್ನಲಾಗಿತ್ತು. ಇದೀಗ ಟಿಕೆಟ್ ರೋಲ್ಗಳ ಕೊರತೆಯೂ ಕಾಣಿಸಿಕೊಂಡಿರುವುದು ಸಾರಿಗೆ ಇಲಾಖೆಯ ಆರ್ಥಿಕ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾರಿ ಶಕ್ತಿ ಯೋಜನೆಯ ಆರ್ಥಿಕ ಹೊರೆ ಇದಕ್ಕೆ ಕಾರಣವೇ ಎಂಬ ಚರ್ಚೆಯೂ ಆರಂಭವಾಗಿದೆ.



