ಚಿಕ್ಕಬಳ್ಳಾಪುರ: ಹೆಣ್ಣುಮಕ್ಕಳ ಪಿಜಿಗಳನ್ನೇ ಟಾರ್ಗೆಟ್ ಮಾಡಿಕೊಂಡು ನುಗ್ಗಿ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗೆ ಚಿಕ್ಕಜಾಲ ಪೊಲೀಸರು ಗುಂಡೇಟು ನೀಡಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ನರೇಶ್ ಎಂಬಾತ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಬೆಂಗಳೂರಿನ ಯಲಹಂಕ ಹಾಗೂ ಹುಣಸಮಾರನಹಳ್ಳಿ ಸುತ್ತಮುತ್ತಲಿನ ಪಿಜಿಗಳಿಗೆ ನುಗ್ಗುತ್ತಿದ್ದ ಆರೋಪಿ, ಅಲ್ಲಿದ್ದ ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಮೊಬೈಲ್ಗಳನ್ನು ಕದ್ದು ಪರಾರಿಯಾಗುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಹುಣಸಮಾರನಹಳ್ಳಿ ಬಳಿಯ ಪಿಜಿಯೊಂದಕ್ಕೆ ನುಗ್ಗಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಪ್ರಕರಣದ ಬೆನ್ನಲ್ಲೇ ಆರೋಪಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಲಕ್ಷ್ಮಣ್ ಹಾಗೂ ಸಚಿನ್ ಎಂಬ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಆರೋಪಿ ಚಾಕುವಿನಿಂದ ದಾಳಿ ಮಾಡಲು ಮುಂದಾಗಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಚಿಕ್ಕಜಾಲ ಸಿಪಿಐ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ನರೇಶ್ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇವನಹಳ್ಳಿ ಬಳಿಯ ಐವಿಸಿ ರಸ್ತೆ ಲೇಔಟ್ನಲ್ಲಿ ಈ ಘಟನೆ ನಡೆದಿದೆ.









