ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಸರಾ ಸಮಯದಲ್ಲೇ ಕರಾವಳಿ ಭಾಗದ ಕಂಬಳವನ್ನು ಆಯೋಜಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ನಾಡಹಬ್ಬ ದಸರಾ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಯದುವೀರ್ ಒಡೆಯರ್, ಪ್ರತಿವರ್ಷದಂತೆ ಈ ಬಾರಿಯೂ ದಸರಾ ಆಚರಣೆಗೆ ಸಿದ್ಧತೆಗಳು ನಡೆದಿವೆ. ಅರಮನೆಯ ಸಂಪ್ರದಾಯ ಹಾಗೂ ಆಚರಣೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿದೆ. ಕಂಬಳವನ್ನು ಬೇರೆ ಸಮಯದಲ್ಲಿ ಆಯೋಜಿಸಬಹುದಲ್ಲವೇ? ದಸರಾ ವೇಳೆಯಲ್ಲೇ ಕರಾವಳಿ ಭಾಗದ ಆಚರಣೆಯನ್ನು ಮೈಸೂರಿಗೆ ತರುವ ಉದ್ದೇಶವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಈ ಆಯೋಜನೆಯಿಂದ ಕರಾವಳಿ ಮತ್ತು ಮೈಸೂರು ಭಾಗದ ಜನರ ನಡುವೆ ವಿಭಜನೆ ಉಂಟುಮಾಡುವ ಉದ್ದೇಶವಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ವಿಚಾರದಿಂದ ಸಮಸ್ಯೆ ಉಂಟಾಗಬಹುದು ಎಂಬುದು ಕಾಂಗ್ರೆಸ್‌ಗೂ ತಿಳಿದಿದೆ. ಆದರೂ ಉದ್ದೇಶಪೂರ್ವಕವಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಗೌರವವಿದೆ. ಆದರೆ, ದಸರಾ ಸಮಯದಲ್ಲೇ ಕಂಬಳ ನಡೆಸುವ ಅಗತ್ಯವಿಲ್ಲ. ಈ ವಿಚಾರಕ್ಕೆ ಸ್ಥಳೀಯರು ಹಾಗೂ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.



