ವಿಜಯಸಾಕ್ಷಿ ಸುದ್ದಿ, ಗದಗ: ಭದ್ರ ಬುನಾದಿಯೊಂದಿಗೆ ಭವ್ಯ ಕಟ್ಟಡ ನಿರ್ಮಿಸುವ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯವನ್ನೂ ಭದ್ರವಾಗಿ ರೂಪಿಸಿ, ಅವರನ್ನು ನಾಡಿನ ಹಾಗೂ ದೇಶದ ಕಣ್ಮಣಿಗಳನ್ನಾಗಿ ಮಾಡಬೇಕು ಎಂದು ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಹೇಳಿದರು.
ನಗರದ ಡಿ.ಸಿ. ಮಿಲ್ ಕಾಂಪೌಂಡ್ನ ಕಾರ್ಮಿಕರ ಮಹಾಸಂಘದ ಕಾರ್ಯಾಲಯದಲ್ಲಿ ಸೋಮವಾರ ನಡೆದ ಗದಗ-ಬೆಟಗೇರಿ ಸೆಂಟ್ರಿಂಗ್ ಮತ್ತು ಬಾರ್ ಬೆಂಡಿಂಗ್ ಮೇಸ್ತ್ರಿಗಳ ಸಂಘದ 4ನೇ ವಾರ್ಷಿಕೋತ್ಸವ ಹಾಗೂ ಕಾರ್ಮಿಕರ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಂಘದ ಸದಸ್ಯರು ಸ್ವಂತ ಕೊಡುಗೆಯಿಂದ ಸುಮಾರು 50 ಮಕ್ಕಳಿಗೆ ತಲಾ ₹700 ಮೌಲ್ಯದ ಶಾಲಾ ಬ್ಯಾಗ್, ನೋಟ್ಬುಕ್, ಕಂಪಾಸ್ ಬಾಕ್ಸ್ ಹಾಗೂ ಲೇಖನ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಲೇಬರ್ ಕಾರ್ಡ್ನಲ್ಲಿರುವ ಹೆಸರು ಒಂದೇ ರೀತಿಯಾಗಿರಬೇಕು. ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದು, ಆಧಾರ್ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮದುವೆ ಸಹಾಯಧನ, ತಾಯಿ-ಮಗು ಸಹಾಯಧನ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಲೇಬರ್ ಕಾರ್ಡ್ ಅನ್ನು ಪ್ರತಿ ವರ್ಷ ನವೀಕರಿಸಬೇಕು ಎಂದು ಸಲಹೆ ನೀಡಿದರು.
ಕೆಲಸದ ಸ್ಥಳದಲ್ಲಿ ಹೆಲ್ಮೆಟ್, ಸುರಕ್ಷತಾ ಶೂ ಹಾಗೂ ಜಾಕೆಟ್ ಧರಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಮದ್ಯ, ತಂಬಾಕು ಹಾಗೂ ಗುಟ್ಕಾದಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಹೆಸ್ಕಾಂ ಜಾಗೃತ ದಳದ ಪಿಎಸ್ಐ ಮಾರುತಿ ಜೋಗದಂಡಕರ ಮಾತನಾಡಿ, ಬಡತನದ ನೆಪದಲ್ಲಿ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಬಾಲ್ಯದ ಅಂಕ ಅಥವಾ ಪ್ರತಿಭೆಯ ಆಧಾರದ ಮೇಲೆ ಮಗುವಿನ ಭವಿಷ್ಯ ನಿರ್ಧರಿಸುವುದು ಸರಿಯಲ್ಲ ಎಂದರು.
ತಮ್ಮ ಜೀವನದ ಅನುಭವ ಹಂಚಿಕೊಂಡ ಅವರು, ತಂದೆಯಿಲ್ಲದೆ ತಾಯಿಯ ದುಡಿಮೆಯಲ್ಲಿ ಬೆಳೆದ ತಾವು ಶಾಲಾ ದಿನಗಳಲ್ಲೇ ಇಟ್ಟಿಗೆ ಭಟ್ಟಿ, ಗೌಂಡಿ ಹಾಗೂ ಕಾರ್ಪೆಂಟರಿ ಕೆಲಸ ಮಾಡಿದ್ದು, ಪದವಿ ವ್ಯಾಸಂಗದ ಸಂದರ್ಭದಲ್ಲಿ ಆಟೋ ಓಡಿಸುತ್ತಲೇ ಶಿಕ್ಷಣ ಮುಂದುವರಿಸಿದ್ದಾಗಿ ಸ್ಮರಿಸಿದರು. ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಆರಂಭಿಸಿ ಅಪರಾಧ ಪತ್ತೆಯಲ್ಲಿ ಗುರುತಿಸಿಕೊಂಡು ರಾಷ್ಟ್ರಪತಿ ಪೊಲೀಸ್ ಪದಕ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವುದಾಗಿ ತಿಳಿಸಿದರು.
ಗದಗ ಶಹರ ಬಿಆರ್ಪಿ ಮಹ್ಮದ್ಶಫಿ ಯರಗುಡಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಣಕ್ಕಿಂತ ಪಾಲಕರು ನೀಡುವ ಸಮಯ, ಪ್ರೀತಿ ಹಾಗೂ ಮೌಲ್ಯಗಳು ಹೆಚ್ಚು ಮಹತ್ವದ್ದಾಗಿವೆ. ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡಬೇಕು. ಪ್ರತಿದಿನ ಸ್ವಲ್ಪ ಸಮಯ ಮಕ್ಕಳೊಂದಿಗೆ ಕಳೆಯಬೇಕು. ಮೊಬೈಲ್ ಕುಟುಂಬದ ಸಂವಾದಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಣದ ಅಂತಿಮ ಗುರಿ ಕೇವಲ ಪದವಿ ಪಡೆಯುವುದಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಾಗಿದೆ ಎಂದರು.
ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಮಾಬುಖಾನ್ ಪಠಾಣ ಮಾತನಾಡಿ, ಎಲ್ಲ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಮಹಾಸಂಘವು ರಾಜ್ಯದಲ್ಲಿಯೇ ಮಾದರಿ ಸಂಘವಾಗಿ ಹೊರಹೊಮ್ಮುತ್ತಿದೆ. ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿ, ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ ಪೂರ್ಣಗೊಳಿಸಲು ಅಗತ್ಯವಿದ್ದಲ್ಲಿ ನೆರವು ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಗದಗ-ಬೆಟಗೇರಿ ಎ.ಎಲ್.ಸಿ ಕಾರ್ಮಿಕ ಸಂಘದ ಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಾಂದಸಾಬ ಅಬ್ಬಿಗೇರಿ ಅಧ್ಯಕ್ಷತೆ ವಹಿಸಿದ್ದರು.
ಕೆ.ಬಿ. ಕುಡಗುಂಟಿ ಸ್ವಾಗತಿಸಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಜಂದಿಸಾಬ ಢಾಲಾಯತ ವಂದಿಸಿದರು. ಸಂಘದ ಕಾರ್ಯದರ್ಶಿ ಮಹ್ಮದ್ಯುಸೂಫ ಬೇಪಾರಿ, ಸಹಕಾರ್ಯದರ್ಶಿ ಜಾವೇದ ಹೈದರ್, ಖಜಾಂಚಿ ಬಸವರಾಜ ನಿರೇರ, ಗೌರವಾಧ್ಯಕ್ಷ ರಿಯಾಜ್ಅಹ್ಮದ್ ಡಂಬಳ, ಉಪಾಧ್ಯಕ್ಷ ಶಿವಶಂಕರಗೌಡ ಕರಿಸೋಮನಗೌಡ್ರ, ಸದಸ್ಯರಾದ ಚಾಂದಸಾಬ ಅಬ್ಬಿಗೇರಿ, ನೂರಅಹ್ಮದ್ ಶಿರಹಟ್ಟಿ, ಬಾಬಾಜಾನ್ ಅತ್ತಾರ, ರೆಹಮಾನ್ಸಾಬ ಕರಮುಡಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೈಕೆಲಸದಲ್ಲಿ ಯಾವುದೇ ಕೀಳರಿಮೆ ಇಲ್ಲ. ಆದರೆ ನಾವು ಅನುಭವಿಸಿದ ಬದುಕೇ ನಮ್ಮ ಮಕ್ಕಳಿಗೂ ಅನಿವಾರ್ಯ ಎಂದು ಭಾವಿಸಬೇಡಿ. ಅವರಿಗೆ ಶಿಕ್ಷಣದ ಅವಕಾಶ ನೀಡಿ.
— ಮಾರುತಿ ಜೋಗದಂಡಕರ, ಪಿಎಸ್ಐ, ಹೆಸ್ಕಾಂ ಜಾಗೃತ ದಳ



