HomeGadag Newsಬಂಡಾರದಲ್ಲಿ ಮಿಂದೆದ್ದ ಭಕ್ತರು

ಬಂಡಾರದಲ್ಲಿ ಮಿಂದೆದ್ದ ಭಕ್ತರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವದ ಅಂಗವಾಗಿ 18 ವರ್ಷಗಳ ಬಳಿಕ ಬುಧವಾರ ನಡೆದ ಬಂಡಾರದ ಜಾತ್ರೆ ಅಪಾರ ಭಕ್ತಸಾಗರಕ್ಕೆ ಸಾಕ್ಷಿಯಾಯಿತು. 140 ಕ್ವಿಂಟಾಲ್ ಬಂಡಾರದಲ್ಲಿ ನಗರದ ಪ್ರಮುಖ ರಸ್ತೆಗಳು ಹಳದಿಮಯವಾಗಿ ಕಂಗೊಳಿಸಿದರೆ, ಸಹಸ್ರಾರು ಭಕ್ತರು ಪರಸ್ಪರ ಬಂಡಾರ ಹಚ್ಚಿಕೊಂಡು ದೇವಿಯರಿಗೆ ಭಕ್ತಿಯನ್ನು ಸಮರ್ಪಿಸಿ ಸಂಭ್ರಮಿಸಿದರು.

ಒಕ್ಕಲಗೇರಿಯ ದ್ಯಾಮವ್ವನ ಕಟ್ಟಿಯಿಂದ ಆರಂಭಗೊಂಡ ದೇವರ ಪಲ್ಲಕ್ಕಿಗಳ ಮೆರವಣಿಗೆ ಗಂಜಿ ಬಸವೇಶ್ವರ ವೃತ್ತ, ರಾಚೋಟೇಶ್ವರ ಗುಡಿ, ಹನುಮಾನ್ ಗರಡಿ, ಮಾಬುಸುಬಾನಿ ಕಟ್ಟಿ, ನಾಲ್ವಾಡ ಗಲ್ಲಿ, ತಿಲಕ್ ಪಾರ್ಕ್ ರಸ್ತೆ ಮಾರ್ಗವಾಗಿ ಜೋಡ ಮಾರುತಿ ದೇವಸ್ಥಾನದ ಎದುರಿನ ದುರ್ಗಾದೇವಿ ದೇವಸ್ಥಾನದವರೆಗೆ ಸಾಗಿತು.

ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಬಂಡಾರದ ಹಳದಿ ಬಣ್ಣವೇ ಕಂಗೊಳಿಸಿತು. ವಿವಿಧೆಡೆ ಬಂಡಾರ ತುಂಬಿದ ಚೀಲಗಳನ್ನು ಇರಿಸಲಾಗಿತ್ತು. ಭಕ್ತರು ಪರಸ್ಪರ ಬಂಡಾರ ಎರಚಿಕೊಂಡು, ‘ಉಧೋ ಉಧೋ’ ಘೋಷಣೆಗಳನ್ನು ಮೊಳಗಿಸುತ್ತ ದೇವಿಯರ ಕೃಪೆಗೆ ಪಾತ್ರರಾಗಲು ಹಂಬಲಿಸಿದರು. ಮಹಿಳೆಯರು ಕುಂಭ-ಆರತಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರೆ, ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರು.

108 ಡೊಳ್ಳುಗಳ ನಿನಾದ; ಭಕ್ತಿಯ ಮೆರವಣಿಗೆ

ಮೆರವಣಿಗೆಯಲ್ಲಿ 108 ಡೊಳ್ಳು ಕುಣಿತ, ಸಮ್ಮಾಳ, ಚಂಡಿ ವಾದ್ಯ, ವಿವಿಧ ವೇಷಧಾರಿಗಳ ತಂಡಗಳು ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿ ಜಾತ್ರೆಯ ಸಡಗರ ಹೆಚ್ಚಿಸಿದವು. ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ ಹಾಗೂ ಬಂಡಾರದ ಎರಚಾಟದಿಂದ ಇಡೀ ನಗರವೇ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದಿತ್ತು.

ಹರಿ ಜಾತ್ರೆಯ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ನಿಯಮಗಳನ್ನು ಪಾಲಿಸಲಾಗಿತ್ತು. ಜಾತ್ರೆ ನಡೆಯುವ ಅವಧಿಯಲ್ಲಿ ಮನೆಗಳಲ್ಲಿ ಅಡುಗೆ ಮಾಡದಿರುವುದು, ಪಾದರಕ್ಷೆ ಧರಿಸದಿರುವುದು ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳನ್ನು ಭಕ್ತರು ಶ್ರದ್ಧೆಯಿಂದ ಅನುಸರಿಸಿದರು.

12 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಹೀಗಾಗಿ 18 ವರ್ಷಗಳ ಬಳಿಕ ನಡೆದ ಜಾತ್ರೆಗೆ ವಿಶೇಷ ಮಹತ್ವ ದೊರೆತಿದ್ದು, ಗದಗ-ಬೆಟಗೇರಿ ಅವಳಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.

ತವರುಮನೆಯಿಂದ ಗಂಡನ ಮನೆಗೆ ದೇವಿಯರ ಪಯಣ

ಒಕ್ಕಲಗೇರಿಯ ದ್ಯಾಮವ್ವನ ಕಟ್ಟೆ ದೇವಿಯರ ತವರುಮನೆಯ ಪ್ರತೀಕವಾಗಿದ್ದು, ನಾಲ್ವಾಡ ಮನೆತನದ ಮಗಳು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಮೆರವಣಿಗೆ ನಾಲ್ವಾಡದವರ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಸಂಪ್ರದಾಯ ನೆರವೇರಿತು. ಬಳಿಕ ಗಂಡನ ಮನೆಯಾದ ಕಿಲ್ಲಾ ಓಣಿಯತ್ತ ದೇವಿಯರ ಪಯಣ ಸಾಗಿತು.

ಭಕ್ತರು ದೇವಿಯರಿಗೆ ಉಡಿ ತುಂಬಿ, ಹರಕೆ ಸಲ್ಲಿಸಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಗಂಡನ ಮನೆಗೆ ಬೀಳ್ಕೊಡುವ ಸಂಭ್ರಮದಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಳದಿಮಯವಾದ ನಗರ

ಬಂಡಾರದ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಳದಿ ಬಣ್ಣದಲ್ಲಿ ಮಿಂದೆದ್ದಿದ್ದವು. ಹಲವರು ಹಳದಿ ಬಣ್ಣದ ಉಡುಪು ಧರಿಸಿ ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಾವಿರಾರು ಭಕ್ತರು ಒಂದೆಡೆ ಸೇರಿದ್ದರಿಂದ ಜೋಡ ಮಾರುತಿ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ ಹಾಗೂ ಮೇನ್ ಬಜಾರ್ ಸುತ್ತಮುತ್ತ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಪೊಲೀಸರು ಸ್ಥಳದಲ್ಲಿದ್ದು ಸಂಚಾರ ವ್ಯವಸ್ಥೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಂಡಾರ ಜಾತ್ರೆಯಲ್ಲಿ ವಿನೋದ ಮೊರಬದ, ಸಂಗಮೇಶ ಕವಳಿಕಾಯಿ, ಬಸವರಾಜ ತುಪ್ಪದ, ಸುನೀಲ ಮುದೇನಗುಡಿ, ಪ್ರವೀಣ ಅಂದೇಲಿ, ಮಲ್ಲು ಕಿರೇಸೂರು, ಶ್ರೀಧರ್ ವಜ್ರಬಂಡಿ, ರಾಜು ಖಾನಪ್ಪನವರ್ ಇತರರು ಭಾಗವಹಿಸಿದ್ದರು.

ಗದಗ-ಬೆಟಗೇರಿ ಗ್ರಾಮದೇವಿಯರ ಹರಿ ಜಾತ್ರೋತ್ಸವದ ಪ್ರಮುಖ ಆಕರ್ಷಣೆಯೇ ಬಂಡಾರದ ಜಾತ್ರೆ. ಅವಳಿ ನಗರ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕಾರಣರಾಗಿದ್ದಾರೆ.

— ವಸಂತ ಪಡಗದ, ಜಾತ್ರಾ ಸಮಿತಿ ಸಹ ಕಾರ್ಯದರ್ಶಿ

ಬಂಡಾರದ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದು ನಮ್ಮ ಪ್ರಾಚೀನ ಸಂಸ್ಕೃತಿ ಹಾಗೂ ಪರಂಪರೆ ಇಂದಿಗೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಗೊಳಿಸಿದ್ದಾರೆ.

ಕೊಟ್ರಪ್ಪ ಕಮತರ

ಬಾಕ್ಸ್: 18 ವರ್ಷಗಳ ಬಳಿಕ ಹಳದಿಮಯವಾದ ಗದಗ

ಒಂಬತ್ತು ದಿನಗಳ ಹರಿ ಜಾತ್ರಾ ಮಹೋತ್ಸವದ ಕೊನೆಯ ದಿನ ನಡೆದ ಬಂಡಾರದ ಜಾತ್ರೆ ಭಕ್ತರ ಪಾಲಿಗೆ ಅವಿಸ್ಮರಣೀಯ ಕ್ಷಣವಾಯಿತು. 140 ಕ್ವಿಂಟಾಲ್ ಬಂಡಾರ, ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ, 108 ಡೊಳ್ಳುಗಳ ನಿನಾದ ಹಾಗೂ ವೈವಿಧ್ಯಮಯ ಕಲಾತಂಡಗಳ ಪ್ರದರ್ಶನ ಜಾತ್ರೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img