ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪ್ರವಾದಿ ಹಜರತ್ ಮಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಯಿತು. ರಾಮನಗರ, ಅರಳಿಹಳ್ಳಿ, ಬಸವೇಶ್ವರ ಬಜಾರ್, ಹಳೆ ಊರು, ಜಾಲೀನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಸ್ಲಿಂ ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಯುವಕರು ಹಾಗೂ ಸಮಾಜದ ಮುಖಂಡರು ಪ್ರವಾದಿಯ ಸಂದೇಶ ಸಾರುವ ಘೋಷಣೆಗಳನ್ನು ಮೊಳಗಿಸುತ್ತ ಸಾಗಿದರು.
ಪ್ರವಾದಿ ಮಹಮ್ಮದ್ ಅವರು ಸಾರಿದ ಸಮಾನತೆ, ಶಾಂತಿ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನಾದರ್ಶಗಳನ್ನು ಸ್ಮರಿಸುತ್ತ ಈದ್ ಮಿಲಾದ್ ಆಚರಿಸುವುದು ವಿಶೇಷವಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದರು.
ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್. ಭೀಮ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಡಾ. ಸಾಹಿರಾಬಾನು, ಪುರಸಭೆ ಸದಸ್ಯೆ ರೇಷ್ಮಾ ಶಿಖಂದರ್, ತೆಲಿಗಿ ನೆಲ ಇಸ್ಮಾಯಿಲ್ ಸಾಹೇಬ್, ಬಶೀರ್ ಸಾಹೇಬ್, ಎಣ್ಣಿ ಭಾಷಾ, ದಾದಾ ಕಲಂದರ್, ಜಂದಿ ಸಾಹೇಬ್, ನೂರು ಮಹಮ್ಮದ್ ಅಬ್ಬು, ನೂರಿ, ಗುಲ್ಜರ್, ದಾದಾಪೀರ್, ಕೆಜಿಎನ್ ಅಲ್ಲಾಭಕ್ಷಿ, ದಾದು ತತ್ತಿ ಕಾಶಿಂ, ಜಿನ್ನ ಸಾಹೇಬ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಮಂದಿ ಪಾಲ್ಗೊಂಡಿದ್ದರು.



