HomeGadag Newsಸೌಹಾರ್ದದ ಸಂದೇಶ ಸಾರಿದ ಈದ್ ಮಿಲಾದ್

ಸೌಹಾರ್ದದ ಸಂದೇಶ ಸಾರಿದ ಈದ್ ಮಿಲಾದ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಎಲ್ಲ ಧರ್ಮಗಳ ಜನರು ಪರಸ್ಪರ ಗೌರವ ಹಾಗೂ ಸಹೋದರತ್ವದಿಂದ ಒಂದಾಗಿ ಸಾಗಿದಾಗ ಮಾತ್ರ ರಾಷ್ಟ್ರದ ಸಮಗ್ರ ಪ್ರಗತಿ ಸಾಧ್ಯ. ದೇಶಪ್ರೇಮ ಮತ್ತು ಸಂವಿಧಾನದ ರಕ್ಷಣೆ ಇಸ್ಲಾಂ ಧರ್ಮದ ಪ್ರಮುಖ ಆಶಯಗಳಾಗಿದ್ದು, ದ್ವೇಷ-ವೈಷಮ್ಯ ಬದಿಗೊತ್ತಿ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಬೆಳಗಾವಿಯ ಜಮಿಯತೆ ಉಲ್ಮಾ ಜಿಲ್ಲಾ ಕಾರ್ಯದರ್ಶಿ ಹಜರತ್ ಮೌಲಾನಾ ಮಹಮ್ಮದ್ ಆರೀಫ್ ಸಾಬ್ ಇನಾಮಿ ಹೇಳಿದರು.

ನಗರದ ಉರ್ದು ಸೆಂಟ್ರಲ್ ಶಾಲೆ ಆವರಣದಲ್ಲಿ ಗದಗ–ಬೆಟಗೇರಿ ಈದ್ ಮಿಲಾದ್ ಕಮಿಟಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಅವರು ಉಪನ್ಯಾಸ ನೀಡಿದರು.

ಮಾನವ ಕಲ್ಯಾಣಕ್ಕಾಗಿ ಬದುಕಿದ ಪೈಗಂಬರ್ ಮಹಮ್ಮದ ಅವರು ಪ್ರೀತಿ, ಕ್ಷಮೆ, ಸಹನೆ ಮತ್ತು ಕರುಣೆಯ ಹಾದಿ ತೋರಿಸಿದ್ದಾರೆ. ವಿರೋಧಿಗಳನ್ನೂ ದ್ವೇಷಿಸದೆ ಮಾನವೀಯತೆಯಿಂದ ಕಾಣಬೇಕು ಎಂಬ ಅವರ ಸಂದೇಶ ಸಾರ್ವಕಾಲಿಕವಾದದ್ದು. ಹೀಗಾಗಿ ಅವರ ಜನ್ಮದಿನದ ಆಚರಣೆ ಕೇವಲ ಸಂಪ್ರದಾಯವಾಗದೆ, ಆದರ್ಶಗಳ ಅನುಷ್ಠಾನಕ್ಕೆ ಪ್ರೇರಣೆಯಾಗಬೇಕು ಎಂದರು.

ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪೈಗಂಬರ್ ಅವರ ತತ್ವಗಳನ್ನು ಅಳವಡಿಸಿಕೊಂಡರೆ ವೈಯಕ್ತಿಕ ಬದುಕಿನಲ್ಲೂ ಶಾಂತಿ ನೆಲೆಸುವುದರ ಜತೆಗೆ ಸಮಾಜದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಲಿದೆ. ಜಗತ್ತಿನ ಶಾಂತಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಭಕ್ತಿ–ಸಡಗರದ ಮೆರವಣಿಗೆ

ಹಬ್ಬದ ಅಂಗವಾಗಿ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು. ಬಾವುಟಗಳನ್ನು ಹಿಡಿದು ಸಾಗಿದ ಜನರು ಧಾರ್ಮಿಕ ಘೋಷಣೆಗಳನ್ನು ಮೊಳಗಿಸಿದರು.

ಮೆರವಣಿಗೆಯ ಮಾರ್ಗದಲ್ಲಿ ಸಾರ್ವಜನಿಕರಿಗೆ ಸಿಹಿತಿನಿಸು ಹಾಗೂ ತಂಪು ಪಾನೀಯ ವಿತರಿಸಲಾಯಿತು. ಉರ್ದು ಸೆಂಟ್ರಲ್ ಶಾಲೆ ಆವರಣದ ಕಾರ್ಯಕ್ರಮದ ವೇದಿಕೆಯವರೆಗೆ ಸಾಗಿದ ಮೆರವಣಿಗೆಯಲ್ಲಿ ನಿರ್ಮಿಸಿದ್ದ ಮೆಕ್ಕಾ ಮಾದರಿ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ರೋಣದ ಬಾಲಕಿ ಇಕ್ರಾನಾಜ್ ರಚಿಸಿರುವ ಆರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ನಗರದ ಮಸೀದಿಗಳ ಮುಖ್ಯಸ್ಥರನ್ನೂ ಗೌರವಿಸಲಾಯಿತು.

ಜಮಿಯತೆ ಉಲ್ಮಾ ಕಮಿಟಿ ಅಧ್ಯಕ್ಷ ಅಕ್ಬರ್‌ಸಾಬ್ ಪಿರಜಾದೆ, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಆಸೀಫ್ ಜಿ. ದಂಡಿನ, ಯೂಸುಫ್ ಡಂಬಳ, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಎಂ.ಎಂ. ಮಾಳೆಕೊಪ್ಪ, ಡಾ. ನಿಜಾಮುದ್ದೀನ್ ಅತ್ತಾರ್, ಜೀವನಸಾಬ್ ನಮಾಜಿ, ಡಾ. ಪ್ಯಾರಾ ಅಲಿ ನೂರಾನಿ, ವಿನಾಯಕ ಬಳ್ಳಾರಿ, ಬಸವರಾಜ ಕಡೇಮನಿ, ಎಂ.ಸಿ. ಶೇಖ್, ಅನ್ವರ್‌ಸಾಬ್ ಬಳ್ಳಾರಿ, ಪೀರ್‌ಸಾಬ್ ಕೌತಾಳ, ಖಾಜಿ, ಪೆಂಡಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಡಿ.ಜೆ.ಗೆ ಅವಕಾಶ ನೀಡದೆ ಈ ಬಾರಿ ಆಚರಣೆಯನ್ನು ಅರ್ಥಪೂರ್ಣಗೊಳಿಸಿರುವುದು ವಿಶೇಷ. 150 ಮಂದಿಯ ಕಣ್ಣು ತಪಾಸಣೆ ಹಾಗೂ 50 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಗಿದೆ.

— ಅಕ್ಬರ್‌ಸಾಬ್ ಬಬರ್ಚಿ, ಅಧ್ಯಕ್ಷ, ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ

ಆಚರಣೆಗೆ ಸಮಾಜಸೇವೆಯ ಸ್ಪರ್ಶ

ಧಾರ್ಮಿಕ ಕಾರ್ಯಕ್ರಮದ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ಪ್ರತಿಭಾ ಪ್ರೋತ್ಸಾಹಕ್ಕೆ ಒತ್ತು ನೀಡಲಾಯಿತು. ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ಬಾಲಕಿ ಇಕ್ರಾನಾಜ್‌ಳ ಆರು ಕೃತಿಗಳ ಬಿಡುಗಡೆ, ವಿದ್ಯಾರ್ಥಿಗಳ ಅಭಿನಂದನೆ ಮತ್ತು ಮಸೀದಿ ಮುಖ್ಯಸ್ಥರ ಗೌರವ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img