ಬೆಂಗಳೂರು: ಕೆಪಿಎಸ್ಸಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿದ ವೇಳೆ 15 ಗ್ರೂಪ್ ಬಿ ಹಾಲ್ ಟಿಕೆಟ್ಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ ಸಿಐಡಿ ಅಧಿಕಾರಿಗಳು, ಬಸವರಾಜ್ ಕನ್ನಾಳೆ ಮನೆಯಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಕಂಡು ದಂಗಾಗಿದ್ದಾರೆ. ಶೋಧದ ವೇಳೆ ಬಸವರಾಜ್ ಮನೆಯಲ್ಲಿ ಬರೋಬ್ಬರಿ 15 ಪರೀಕ್ಷೆಗಳ ಹಾಲ್ ಟಿಕೆಟ್ಗಳು ಪತ್ತೆಯಾಗಿದ್ದು, ಕೇವಲ ಪಶು ವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ ಬಿ-ಗ್ರೂಪ್ ಹುದ್ದೆಗಳು ಹಾಗೂ ಕೆಎಎಸ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳೂ ಡೀಲ್ ಆಗಿರುವ ಅನುಮಾನ ಸಿಐಡಿಗೆ ಕಾಡುತ್ತಿದೆ.
ಕೆಎಎಸ್ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಹೀಗೆ ಮೂರೂ ಹಂತಗಳಿಗೆ ಒಂದೇ ಪ್ಯಾಕೇಜ್ ದರ ನಿಗದಿಪಡಿಸಿ ಅಕ್ರಮ ಎಸಗಿರುವ ಸಾಧ್ಯತೆಯಿದೆ ಎಂದು ಸಿಐಡಿ ಶಂಕಿಸಿದೆ. ಸದ್ಯ ಪಶು ವೈದ್ಯಾಧಿಕಾರಿ ಹುದ್ದೆಯ ಅಕ್ರಮ ತನಿಖೆ ಮುಗಿಯುತ್ತಿದ್ದಂತೆ, ಉಳಿದ ಪರೀಕ್ಷೆಗಳ ಹಗರಣದ ಜಾಡು ಹಿಡಿಯಲು ಸಿಐಡಿ ಮುಂದಾಗಿದೆ. ರಾಜ್ಯ ಸರ್ಕಾರದಿಂದ ಅನುಮತಿ ದೊರೆತರೆ ಕೆಎಎಸ್ ಹುದ್ದೆಗಳ ನೇಮಕಾತಿ ಅಕ್ರಮದ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಸಲು ಸಿಐಡಿ ಯೋಜಿಸಿದೆ.



