ಬೆಂಗಳೂರು: ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಸೆಪ್ಟೆಂಬರ್ 6ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಪರೀಕ್ಷೆ ನಡೆದ ಕೇವಲ ಐದು ದಿನಗಳಲ್ಲೇ ತಾತ್ಕಾಲಿಕ ಫಲಿತಾಂಶ ಪ್ರಕಟಿಸುವ ಮೂಲಕ ಕೆಇಎ ದಾಖಲೆ ನಿರ್ಮಿಸಿದೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 14ರ ಸಂಜೆ 5.30ರೊಳಗೆ ನಿಗದಿತ ಲಿಂಕ್ ಮೂಲಕ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಪರೀಕ್ಷೆ ನಡೆದ ದಿನವೇ ಅಭ್ಯರ್ಥಿಗಳ OMR ಪ್ರತಿಗಳನ್ನು ಸ್ಕ್ಯಾನ್ ಮಾಡಿ, ಪರೀಕ್ಷಾ ಕೇಂದ್ರವಾರು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್ 7ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು.
ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 9ರವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಸೆಪ್ಟೆಂಬರ್ 10ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಇದೀಗ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫಲಿತಾಂಶಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ನಿಗದಿತ ಅವಧಿಯೊಳಗೆ ಸಲ್ಲಿಸಬಹುದಾಗಿದೆ.



