ನವದೆಹಲಿ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ದೇಶನ ಹಾಗೂ ಹಾಡಲು ನಿರಾಕರಿಸಿದರೆ ಕೈಗೊಳ್ಳಬಹುದಾದ ದಂಡಾತ್ಮಕ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ. ಅರ್ಜಿಗೆ ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕರ್ನಾಟಕ ಮೂಲದ ಖ್ಯಾತ ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದು, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವಂತೆ ಮಾಡಿರುವ ನಿಯಮ ಹಾಗೂ ಅದನ್ನು ಹಾಡದಿದ್ದರೆ ದಂಡಾತ್ಮಕ ಕ್ರಮ ಕೈಗೊಳ್ಳುವ ಅವಕಾಶವನ್ನು ಪ್ರಶ್ನಿಸಿದ್ದಾರೆ.
ಅರ್ಜಿದಾರರ ಪರ ಹಿರಿಯ ವಕೀಲ ಎಸ್. ಮುರಳೀಧರ್ ವಾದ ಮಂಡಿಸಿ, ದಂಡಾತ್ಮಕ ಕಾನೂನಿನಲ್ಲಿ ಅಪರಾಧಕ್ಕೆ ಕಾರಣವಾಗುವ ನಡವಳಿಕೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು ಎಂದು ಹೇಳಿದರು. ಅಸ್ಪಷ್ಟ ನಿಯಮಗಳ ಆಧಾರದ ಮೇಲೆ ನಾಗರಿಕರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅವಕಾಶ ನೀಡಬಾರದು ಎಂದು ವಾದಿಸಿದರು.
ವಿಚಾರಣೆ ವೇಳೆ ‘ವಂದೇ ಮಾತರಂ’ನ ಎರಡು ಅಥವಾ ಆರು ಚರಣಗಳ ಪೈಕಿ ಯಾವುದನ್ನು ಅಧಿಕೃತವಾಗಿ ಹಾಡಬೇಕು ಎಂಬ ವಿಚಾರವನ್ನು ಈ ಹಂತದಲ್ಲಿ ನಿರ್ಧರಿಸಲು ಸುಪ್ರೀಂ ಕೋರ್ಟ್ ಮುಂದಾಗಲಿಲ್ಲ. ರಾಷ್ಟ್ರೀಯ ಸಂಕೇತಗಳಿಗೆ ಸಂಬಂಧಿಸಿದ ನೀತಿ ಹಾಗೂ ಅದರ ರೂಪವನ್ನು ನಿರ್ಧರಿಸುವುದು ಸರ್ಕಾರದ ವ್ಯಾಪ್ತಿಯಲ್ಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಆದರೆ, ವಂದೇ ಮಾತರಂ ಹಾಡಲು ನಿರಾಕರಿಸುವ ನಾಗರಿಕರ ವಿರುದ್ಧ ಕ್ರಿಮಿನಲ್ ದಂಡನೆ ವಿಧಿಸಬಹುದೇ ಎಂಬ ಕಾನೂನು ಪ್ರಶ್ನೆಯನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ 1986ರ ಬಿಜೋಯ್ ಎಮ್ಯಾನುಯೆಲ್ ಪ್ರಕರಣದ ತೀರ್ಪನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ರಾಷ್ಟ್ರೀಯ ಗೀತೆಯನ್ನು ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಕೇವಲ ಹಾಡದ ಕಾರಣಕ್ಕೆ ದಂಡಾತ್ಮಕ ಕ್ರಮ ಕೈಗೊಳ್ಳುವ ಪ್ರಶ್ನೆ ಈ ಹಿಂದೆಯೇ ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿತ್ತು. ಇದೇ ಕಾನೂನು ತತ್ವ ಪ್ರಸ್ತುತ ಪ್ರಕರಣಕ್ಕೂ ಅನ್ವಯಿಸಬಹುದೇ ಎಂಬುದು ವಿಚಾರಣೆಯ ಪ್ರಮುಖ ಅಂಶವಾಗಿದೆ.
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ವಿಚಾರಣೆ ವೇಳೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್. ಮುರಳೀಧರ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾಗ್ವಾದವೂ ನಡೆಯಿತು.
ಈ ನಡುವೆ, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡದಂತೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.



