ಬೆಂಗಳೂರು: ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿನಲ್ಲಿ ಗಾಂಧಿ ಜಯಂತಿ ರಜೆಯಂದು ಟ್ರೆಕ್ಕಿಂಗ್‌ಗೆ ತೆರಳಿ, ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಟೆಕ್ಕಿ ವಿನಯ್ ಮೃತದೇಹ ಕೊನೆಗೂ ಪತ್ತೆಯಾಗಿದೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ನಡೆಸಿದ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಕ್ವಾರಿಯ ನೀರಿನಲ್ಲಿ ವಿನಯ್ ಶವ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು. ಗಾಂಧಿ ಜಯಂತಿ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ‘ಬಿಎಲ್ಆರ್ ಹೈಕ್’ (BLR Hike) ಎಂಬ ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಎಂಟು ಜನರ ತಂಡದೊಂದಿಗೆ ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿಗೆ ಟ್ರೆಕ್ಕಿಂಗ್ ತೆರಳಿದ್ದರು.
ಟ್ರೆಕ್ಕಿಂಗ್ ವೇಳೆ ವಿನಯ್ ಸೇರಿದಂತೆ ಇಡೀ ತಂಡ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿತ್ತು. ಕ್ವಾರಿಯ ಮೇಲಿನಿಂದ ಯುವಕ-ಯುವತಿಯರ ತಂಡ ನೀರಿಗೆ ಡೈವ್ ಹೊಡೆದು ಮೋಜುಮಸ್ತಿ ಮಾಡುತ್ತಿದ್ದಾಗ, ಟೆಕ್ಕಿ ವಿನಯ್ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ತಕ್ಷಣವೇ ಸತತ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಇಂದು ಮೃತದೇಹ ಪತ್ತೆಯಾಗಿದೆ. ಈ ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



