HomeIndia News20 ವರ್ಷಗಳ ಹಿಂದಿನ ಎಂಜಿನಿಯರ್ ಆತ್ಮಹತ್ಯೆ ಪ್ರಕರಣ ಮತ್ತೆ ಓಪನ್: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ʼಗೆ...

20 ವರ್ಷಗಳ ಹಿಂದಿನ ಎಂಜಿನಿಯರ್ ಆತ್ಮಹತ್ಯೆ ಪ್ರಕರಣ ಮತ್ತೆ ಓಪನ್: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ʼಗೆ ಸಂಕಷ್ಟ

For Dai;y Updates Join Our whatsapp Group

ತಿರುವನಂತಪುರಂ: ಚುನಾವಣಾ ಆಯೋಗ (ECI) ಹಾಗೂ ಕಾಂಗ್ರೆಸ್ ನಡುವಿನ ಸಂಘರ್ಷದ ನಡುವೆಯೇ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಹಿಂದಿನ ಪ್ರಕರಣವೊಂದರ ತನಿಖೆಗೆ ಕೇರಳಂನ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ.

ಮಲೇಷ್ಯಾ ಪ್ರಜೆಯೊಬ್ಬರ 20 ವರ್ಷಗಳ ಹಿಂದಿನ ಆತ್ಮಹತ್ಯೆ ಪ್ರಕರಣವನ್ನು ಮತ್ತೆ ಕೆದಕಿರುವ ಕೇರಳಂ ಸರ್ಕಾರ, ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ (ಜಾಗೃತ ದಳ) ತನಿಖೆಗೆ ಆದೇಶ ನೀಡಿದೆ. ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರ ಸೂಚನೆಯಂತೆ ಗೃಹ ಇಲಾಖೆಯು 2006ರಲ್ಲಿ ನಡೆಸಿದ್ದ ಪ್ರಾಥಮಿಕ ವಿಜಿಲೆನ್ಸ್ ತನಿಖೆಯ ಕಡತಗಳ ಮಾಹಿತಿಯನ್ನು ಕೋರಿದೆ. ಪ್ರಕರಣದ ಮರು ತನಿಖೆ ನಡೆಸುವಂತೆ ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಎಂ. ವೇಣುಗೋಪಾಲ್ ಅವರು ದೂರು ಸಲ್ಲಿಸಿದ್ದರು.

ಏನಿದು 20 ವರ್ಷಗಳ ಹಿಂದಿನ ಪ್ರಕರಣ? 2006ರಲ್ಲಿ ಜ್ಞಾನೇಶ್ ಕುಮಾರ್ ಅವರು ಕೇರಳಂ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆ ಸಮಯದಲ್ಲಿ ‘ಎಮ್‌ಸಿ’ ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಕೈಗೊಂಡಿದ್ದ PATI-BEL ಕನ್ಸೋರ್ಟಿಯಂ ಕಂಪನಿಯ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಮಲೇಷ್ಯಾದ ಇಂಜಿನಿಯರ್ ಲೀ ಸೀ ಬೀನ್ ಎಂಬುವರು ಮಲೇಷ್ಯಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಲೀ ಬರೆದಿದ್ದರೆನ್ನಲಾದ ಡೆತ್‌ನೋಟ್‌ನಲ್ಲಿ, ಯೋಜನೆಗೆ ಅನುದಾನ ಮಂಜೂರು ಮಾಡುವ ಸಂಬಂಧ ಸರ್ಕಾರಿ ಅಧಿಕಾರಿಗಳಿಂದ ತೀವ್ರ ಒತ್ತಡ ಎದುರಾಗಿತ್ತು ಎಂದು ಉಲ್ಲೇಖಿಸಲಾಗಿತ್ತು. ಜೊತೆಗೆ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರನ್ನೂ ಪ್ರಸ್ತಾಪಿಸಲಾಗಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಎಲ್ಡಿಎಫ್ ಸರ್ಕಾರ ವಿಜಿಲೆನ್ಸ್ ತನಿಖೆಗೆ ಆದೇಶಿತ್ತಾದರೂ ಮುಂದಿನ ಕ್ರಮ ಕೈಗೊಂಡಿರಲಿಲ್ಲ. ಇತ್ತೀಚೆಗೆ ಎಲ್ಡಿಎಫ್ ಸರ್ಕಾರದ ಮಾಜಿ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್, ಲೀ ಆತ್ಮಹತ್ಯೆಯಲ್ಲಿ ಜ್ಞಾನೇಶ್ ಕುಮಾರ್ ಪಾತ್ರವಿತ್ತು ಎಂದು ಬಹಿರಂಗಪಡಿಸಿದ್ದರು.

ಪ್ರಸ್ತುತ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ವಿರುದ್ಧ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಈ ತನಿಖೆಗೆ ಆದೇಶಿಸಿರುವ ಸಮಯವನ್ನು (Timing) ಬಿಜೆಪಿ ತೀವ್ರವಾಗಿ ಪ್ರಶ್ನಿಸಿದೆ. ರಾಜಕೀಯ ಲಾಭಕ್ಕಾಗಿ 20 ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಕೆದಕಲಾಗುತ್ತಿದೆ ಎಂದು ಆಕ್ಷೇಪಿಸಿದೆ. ಮತ್ತೊಂದೆಡೆ, ಈ ವರ್ಷದ ಜನವರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (RTI) ನೀಡಿದ ಉತ್ತರದಲ್ಲಿ, ಯಾವುದೇ ಅಕ್ರಮಗಳು ಕಂಡುಬರದ ಕಾರಣ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರಕರಣವನ್ನು ಕ್ಲೋಸ್ ಮಾಡಲಾಗಿದೆ ಎಂದು ಕೇರಳಂನ ವಿಜಿಲೆನ್ಸ್ ಬ್ಯೂರೋ ತಿಳಿಸಿತ್ತು ಎಂಬುದು ಗಮನಾರ್ಹ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img