ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಔಷಧಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್‌ನನ್ನು ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಮತ್ತಷ್ಟು ಶಾಕಿಂಗ್ ಸಂಗತಿಗಳು ಬೆಳಕಿಗೆ ಬಂದಿವೆ.
ಪ್ರಖ್ಯಾತ ‘ಫೈಜರ್’ (Pfizer) ಕಂಪನಿಯ ಒರಿಜಿನಲ್ ಲೇಬಲ್ ತರುವುದಕ್ಕಾಗಿಯೇ ಆರೋಪಿ ಪ್ರಶಾಂತ್ ವರ್ಷದಲ್ಲಿ ಹತ್ತಾರು ಬಾರಿ ಟರ್ಕಿಗೆ ಭೇಟಿ ನೀಡುತ್ತಿದ್ದ. ಈ ರೀತಿ ಪದೇಪದೆ ಪ್ರಯಾಣಿಸುತ್ತಿದ್ದ ಕಾರಣ ಆತನ ಟರ್ಕಿ ವೀಸಾ ಕ್ಯಾನ್ಸಲ್ ಆಗಿತ್ತು. ತದನಂತರ ಟರ್ಕಿ ಪಕ್ಕದ ಅಜರ್‌ಬೈಜಾನ್ ಸೇರಿದಂತೆ ವಿದೇಶಗಳಿಗೆ ಪ್ರಯಾಣಿಸಲು ಆರಂಭಿಸಿದ್ದ.
ಮಧ್ಯವರ್ತಿಗಳ ಮೂಲಕ ಟರ್ಕಿಯಿಂದ ಫೈಜರ್ ಕಂಪನಿಯ ಒರಿಜಿನಲ್ ಲೇಬಲ್‌ಗಳನ್ನು ಭಾರತಕ್ಕೆ ತರಿಸಿಕೊಳ್ಳುತ್ತಿದ್ದ ಈ ಗ್ಯಾಂಗ್, ನಕಲಿ ಮೆಡಿಸಿನ್‌ಗಳಿಗೆ ಆ ಒರಿಜಿನಲ್ ಲೇಬಲ್‌ಗಳನ್ನು ಅಂಟಿಸಿ ಪ್ಯಾಕ್ ಮಾಡುತ್ತಿತ್ತು. ಹಲವು ಬಾರಿ ಅಸಲಿ ಔಷಧಿಗಳ ಜೊತೆಗೆ ನಕಲಿ ಔಷಧಿಗಳನ್ನು ಬೆರೆಸಿ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಅಜರ್‌ಬೈಜಾನ್ನಿಂದ ವಾಪಸಾಗುತ್ತಿದ್ದ ಆರೋಪಿ ಪ್ರಶಾಂತ್ ವಿರುದ್ಧ ಎಸ್‌ಐಟಿ ಲುಕ್ಔಟ್ ನೋಟಿಸ್ ಜಾರಿ ಮಾಡಿತ್ತು. ಹೀಗಾಗಿ ಸೆಪ್ಟೆಂಬರ್ 28ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅರೈವಲ್ ಗೇಟ್‌ನಲ್ಲಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಯನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿತ್ತು.
ಈ ಜಾಲದಲ್ಲಿ ವೀರೇಶ್ ಜೈನ್ ಮತ್ತೊಬ್ಬ ಪ್ರಮುಖ ಆರೋಪಿಯಾಗಿದ್ದು, ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ. ಈತ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್‌ಗಳಿಗೆ ನಕಲಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಜಾಲವು ವಾರ್ಷಿಕ ಸುಮಾರು 15 ಕೋಟಿ ರೂಪಾಯಿಗಳಷ್ಟು ಬೃಹತ್ ವಹಿವಾಟು ನಡೆಸುತ್ತಿತ್ತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.



