ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಹಲವು ವರ್ಷಗಳ ಕಾಲ ಕಲಾಸೇವೆ ಸಲ್ಲಿಸಿದ್ದ ಹಿರಿಯ ಪೋಷಕ ನಟಿ ಲಲಿತಮ್ಮ (65) ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಸ್ಟ್ರೋಕ್ ಆಗಿದ್ದು, ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಇಂದು ಬೆಳಗ್ಗೆ ಸುಮಾರು 9:30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಲಲಿತಮ್ಮ, ನೂರಾರು ನಾಟಕಗಳು ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದರು. ರಂಗಭೂಮಿಯ ಮೂಲಕ ಕಲಾ ಪಯಣ ಆರಂಭಿಸಿದ ಅವರು ನಂತರ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.
ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಲಲಿತಮ್ಮ ನಿರ್ವಹಿಸಿದ್ದ ‘ಸಾರಾಯಿ ಶಾರದೆ’ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಪಾತ್ರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಬಳಿಕ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಲವು ಅವಕಾಶಗಳು ಅವರನ್ನು ಅರಸಿ ಬಂದಿದ್ದವು.
ಲಲಿತಮ್ಮ ಅವರು ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ’, ‘ಲೈಫ್ ಇಷ್ಟೇನೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಜೊತೆಗೆ ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು.
ರಂಗಭೂಮಿಯಿಂದ ಕಿರುತೆರೆ, ಅಲ್ಲಿಂದ ಬೆಳ್ಳಿತೆರೆಗೆ ಸಾಗಿದ ಲಲಿತಮ್ಮ ಅವರ ಸುಮಾರು ಮೂರೂವರೆ ದಶಕಗಳ ಕಲಾ ಪಯಣ ಇದೀಗ ಅಂತ್ಯಗೊಂಡಿದೆ. ಅವರ ನಿಧನದಿಂದ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗ ಹಿರಿಯ ಪೋಷಕ ನಟಿಯೊಬ್ಬರನ್ನು ಕಳೆದುಕೊಂಡಂತಾಗಿದೆ.



