HomeCrime News‘ತಾತ, ನಾವೂ ನಿಮ್ಮ ಜೊತೆ ಬರ್ತೀವಿ ಎಂದು ಹೊರಟ ಮೊಮ್ಮಕ್ಕಳು: ಒಂದೇ ಕುಟುಂಬದ ಮೂವರ ದುರಂತ...

‘ತಾತ, ನಾವೂ ನಿಮ್ಮ ಜೊತೆ ಬರ್ತೀವಿ ಎಂದು ಹೊರಟ ಮೊಮ್ಮಕ್ಕಳು: ಒಂದೇ ಕುಟುಂಬದ ಮೂವರ ದುರಂತ ಅಂತ್ಯ

For Dai;y Updates Join Our whatsapp Group

ಚಿಕ್ಕಬಳ್ಳಾಪುರ: ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಜಮೀನಿಗೆ ತೆರಳಿದ್ದ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಕರುಣಾಜನಕ ಘಟನೆ ಚಿಂತಾಮಣಿ ತಾಲೂಕಿನ ಹುಸೇನಪುರ ಗ್ರಾಮದಲ್ಲಿ ನಡೆದಿದೆ.

ಹುಸೇನಪುರ ಗ್ರಾಮದ ನಿವಾಸಿ ಮುನಿನಾರಾಯಣಪ್ಪ (60) ಹಾಗೂ ಅವರ ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ಮೃತಪಟ್ಟವರು. ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮುನಿನಾರಾಯಣಪ್ಪ ಅವರು ಪ್ರತಿ ಶನಿವಾರ ತಮ್ಮ ಜಮೀನಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ರೂಢಿ ಹೊಂದಿದ್ದರು. ಅದರಂತೆ ಶನಿವಾರ ಬೆಳಗ್ಗೆಯೂ ಪೂಜೆಗಾಗಿ ಜಮೀನಿಗೆ ಹೊರಟಿದ್ದರು. ಈ ವೇಳೆ ಮೊಮ್ಮಕ್ಕಳಾದ ಯಶ್ವಿನ್ ಹಾಗೂ ಪ್ರಜ್ವಲ್ ಕೂಡ ತಾತನೊಂದಿಗೆ ಹೋಗುವುದಾಗಿ ಹೇಳಿ ಜೊತೆಯಲ್ಲಿ ತೆರಳಿದ್ದರು ಎನ್ನಲಾಗಿದೆ.

ಬೆಳಗ್ಗೆ 9ರಿಂದ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರಟಿದ್ದ ಮೂವರೂ ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಜಮೀನಿನ ಬಳಿ ಹುಡುಕಾಟ ನಡೆಸಿದಾಗ, ದೇವಸ್ಥಾನದ ಸಮೀಪದಲ್ಲಿರುವ ಅಶ್ವತ್ಥಪ್ಪ ಎಂಬುವರ ಜಮೀನಿನ ಕೃಷಿ ಹೊಂಡದಲ್ಲಿ ಮೂವರ ಶವಗಳು ಪತ್ತೆಯಾಗಿವೆ.

ಅವಘಡ ಸಂಭವಿಸಿದ್ದು ಹೇಗೆ?

ತಾತ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಮಕ್ಕಳು ಆಟವಾಡುತ್ತಾ ಅಥವಾ ನೀರು ತರಲು ಕೃಷಿ ಹೊಂಡದ ಬಳಿ ತೆರಳಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರಬಹುದು. ಮೊಮ್ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಮುಂದಾದ ಮುನಿನಾರಾಯಣಪ್ಪ ಕೂಡ ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದೆ.

ಮತ್ತೊಂದೆಡೆ, ಕೃಷಿ ಹೊಂಡದ ಸಮೀಪ ವಿದ್ಯುತ್ ತಂತಿಗಳು ಹಾಗೂ ಪಂಪ್‌ಸೆಟ್ ಸಂಪರ್ಕ ಇರುವುದರಿಂದ ವಿದ್ಯುತ್ ಸ್ಪರ್ಶದಿಂದ ಅವಘಡ ಸಂಭವಿಸಿರಬಹುದೇ ಎಂಬ ಅನುಮಾನವನ್ನೂ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಸಾವಿಗೆ ನಿಖರ ಕಾರಣ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬರಬೇಕಿದೆ.

ಮೃತ ಯಶ್ವಿನ್, ಮುನಿನಾರಾಯಣಪ್ಪ ಅವರ ಪುತ್ರ ನಂದೀಶ್ ಅವರ ಮಗನಾಗಿದ್ದರೆ, ಪ್ರಜ್ವಲ್ ಅವರು ಮುನಿನಾರಾಯಣಪ್ಪ ಅವರ ಸಹೋದರ ವೆಂಕಟರೋಣಪ್ಪ ಅವರ ಪುತ್ರ ನಾರಾಯಣಸ್ವಾಮಿ ಅವರ ಮಗ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಶವಗಳನ್ನು ಕೃಷಿ ಹೊಂಡದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img