ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ವೊಂದು ಫ್ಲೈಓವರ್ನ ಡಿವೈಡರ್ ಮೇಲೆ ಹತ್ತಿದ ಘಟನೆ ನಡೆದಿದೆ.
ಮೈಸೂರು ರಸ್ತೆ ಬಿಜಿಎಸ್ ಫ್ಲೈಓವರ್ ಮೇಲೆ ಬಸ್ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ತಮಿಳುನಾಡಿನ ತಿರುವಣ್ಣಾಮಲೈ ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್, ಮೈಸೂರು ರಸ್ತೆ ಬಿಜಿಎಸ್ ಫ್ಲೈಓವರ್ ಮೇಲೆ ಸಾಗುತ್ತಿತ್ತು. ಈ ವೇಳೆ ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸುತ್ತಿದ್ದ ಕಾರಣ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೆ ಹತ್ತಿದೆ ಎನ್ನಲಾಗಿದೆ.
ಘಟನೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್, ಭಾರೀ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು, ಡಿವೈಡರ್ ಮೇಲೆ ಸಿಲುಕಿದ್ದ ಬಸ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಚಾಲನೆ ವೇಳೆ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.



