ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳಿಗಾಗಿ ಉಚಿತ ಅಧ್ಯಯನ ಕೇಂದ್ರವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ಶಂಷಾದ್ ಬೇಗಂ ತಿಳಿಸಿದರು.
ಪಟ್ಟಣದ ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಭಾನುವಾರದಿಂದ ಅಧ್ಯಯನ ಕೇಂದ್ರ ಆರಂಭಿಸುವ ಯೋಜನೆ ಹೊಂದಿದ್ದು, ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್, ಪಿಡಿಒ, ಪೊಲೀಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದರು.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರ (ಕೋಚಿಂಗ್ ಸೆಂಟರ್) ಆರಂಭಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಬಾಬು ಮಾತನಾಡಿ, ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ಪಟ್ಟಣದ ಗ್ರಾಮೀಣ ಬ್ಯಾಂಕ್ ಎದುರಿನ ನೂತನ ಕಟ್ಟಡದಲ್ಲಿ ಡ್ರೀಮ್ ಇಂಡಿಯಾ ಸೂಪರ್ ಮಾರ್ಕೆಟ್ ಆರಂಭಿಸಲಾಗುವುದು ಎಂದು ಹೇಳಿದರು. ಮಹಿಳಾ ಸಬಲೀಕರಣ, ಬ್ಯಾಂಕಿಂಗ್ ಹಾಗೂ ಇತರೆ ಸಾಮಾಜಿಕ-ಆರ್ಥಿಕ ಚಟುವಟಿಕೆಗಳನ್ನೂ ಸಂಸ್ಥೆ ಕೈಗೊಳ್ಳಲಿದೆ ಎಂದರು.
ಸಂಸ್ಥೆಯ ಸಿಬ್ಬಂದಿ ಮದನ್ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಸಂಸ್ಥೆ 1.25 ಕೋಟಿ ರೂ. ಮೌಲ್ಯದ ಬಹುಮಾನಗಳನ್ನು ಗ್ರಾಹಕರಿಗೆ ವಿತರಿಸಿದ್ದು, ಬಂಗಾರ, ಬುಲೆಟ್ ಬೈಕ್, ಕಾರು ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಹಲವು ಬಹುಮಾನಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉದ್ಯೋಗಿಗಳಾದ ಅಶ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅನುಕೂಲವಾಗುವಂತೆ ಉಚಿತ ಅಧ್ಯಯನ ಕೇಂದ್ರ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರವೂ ಆರಂಭಿಸುವ ಗುರಿ ಹೊಂದಿದ್ದೇವೆ.”
– ಶಂಷಾದ್ ಬೇಗಂ, ಮುಖ್ಯಸ್ಥೆ, ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್



