ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಬಿತ್ತನೆ ಹಂಗಾಮಿನ ಸಂದರ್ಭದಲ್ಲಿ ತಾಲೂಕಿನ ಕೆಲವು ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರೈತರಿಂದ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ ಯೂರಿಯಾ ಖರೀದಿಸುವ ರೈತರಿಗೆ ನ್ಯಾನೋ ಯೂರಿಯಾ ಬಾಟಲಿಯನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸಲಾಗುತ್ತಿದ್ದು, ಇದರಿಂದ ರೈತರು ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುವಂತಾಗಿದೆ ಎಂದು ಕರುನಾಡ ವಿಜಯಸೇನೆ ಆರೋಪಿಸಿದೆ.
ಈ ಕುರಿತು ತಾಲೂಕು ಕೃಷಿ ಅಧಿಕಾರಿ ಎಸ್.ವಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ಪ್ರಕಾಶ್ ಆರ್. (ವಕೀಲರು) ಮಾತನಾಡಿ, ತಾಲೂಕಿನ ರೈತರು ಎದುರಿಸುತ್ತಿರುವ ಗೊಬ್ಬರ ವಿತರಣೆಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕೆಲವು ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಎಂಆರ್‌ಪಿ ದರ ಉಲ್ಲಂಘಿಸಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಯೂರಿಯಾ ಖರೀದಿಸಲು ತೆರಳುವ ರೈತರಿಗೆ ನ್ಯಾನೋ ಯೂರಿಯಾ ಬಾಟಲ್‌ನ್ನು ಕಡ್ಡಾಯವಾಗಿ ಜೋಡಣೆ ಮಾಡಿ ಮಾರಾಟ ಮಾಡುತ್ತಿರುವುದು ರೈತರ ಮೇಲಿನ ಅನ್ಯಾಯವಾಗಿದೆ ಎಂದು ಅವರು ದೂರಿದರು.
ಇದರ ಜೊತೆಗೆ, ಗೊಬ್ಬರ ಖರೀದಿ ವೇಳೆ ಎಫ್‌ಐಡಿ (FID) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವುದರಿಂದ ಹಾಗೂ ತಾಂತ್ರಿಕ ದೋಷಗಳ ಕಾರಣದಿಂದ ಗ್ರಾಮೀಣ ಭಾಗದ ಸಾಮಾನ್ಯ ಮತ್ತು ಅವಿದ್ಯಾವಂತ ರೈತರು ಗೊಬ್ಬರ ಪಡೆಯಲು ಪರದಾಡುವಂತಾಗಿದೆ. ಸರ್ವರ್ ಸಮಸ್ಯೆ, ತಾಂತ್ರಿಕ ಅಡಚಣೆ ಮತ್ತು ದಾಖಲೆ ಪರಿಶೀಲನೆಯ ವಿಳಂಬದಿಂದ ರೈತರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ತಾಲೂಕಿನ ಎಲ್ಲಾ ರಸಗೊಬ್ಬರ ಮಳಿಗೆಗಳ ಮೇಲೆ ವಿಶೇಷ ಪರಿಶೀಲನೆ ನಡೆಸಬೇಕು. ಎಂಆರ್‌ಪಿ ಮೀರಿದ ದರ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನ್ಯಾನೋ ಯೂರಿಯಾ ಕಡ್ಡಾಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು. ಎಫ್‌ಐಡಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ಸುಲಭವಾಗಿ ಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರುನಾಡ ವಿಜಯಸೇನೆ ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ತಾಲೂಕು ಕೃಷಿ ಅಧಿಕಾರಿ ಎಸ್.ವಿ. ಪಾಟೀಲ್, ರೈತರ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತಂದಿರುವುದು ಸ್ವಾಗತಾರ್ಹ. ತಾಲೂಕಿನ ಯಾವುದೇ ಗೊಬ್ಬರ ಅಂಗಡಿಯಲ್ಲಿ ಎಂಆರ್‌ಪಿ ಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ನಾಗಾರ್ಜುನ, ಉಪಾಧ್ಯಕ್ಷ ಹಿಟ್ನಾಳ್ ವಿಶ್ವನಾಥ್, ಪೂಜಾರಿ ಬಸವರಾಜ್, ಗುರುನಾಯ್ಕ, ಖಜಾಂಚಿ ಶಿವಕುಮಾರ್ ಎಂ., ಜಂಟಿ ಕಾರ್ಯದರ್ಶಿಗಳಾದ ಗಾಳೆಪ್ಪ, ಪ್ರಕಾಶ್ ಕಿತ್ತನೂರು, ದೊಡ್ಡಬಸಪ್ಪ, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಗುರುಸ್ವಾಮಿ ಎಂ., ಯುವ ಘಟಕದ ಕಾರ್ಯಾಧ್ಯಕ್ಷ ಸ್ವಾಮಿ ಹೆಚ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ರೈತರು ಗೊಬ್ಬರಕ್ಕಾಗಿ ಅಂಗಡಿಗಳಿಗೆ ಹೋದಾಗ ಹೆಚ್ಚುವರಿ ಹಣ ವಸೂಲಿ ಮಾಡುವುದು ಹಾಗೂ ನ್ಯಾನೋ ಯೂರಿಯಾವನ್ನು ಕಡ್ಡಾಯವಾಗಿ ಖರೀದಿಸಲು ಒತ್ತಾಯಿಸುವುದು ಸರಿಯಲ್ಲ. ರೈತರ ಹಿತಾಸಕ್ತಿಗೆ ಧಕ್ಕೆ ತರುವ ಇಂತಹ ಕ್ರಮಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಇಲ್ಲವಾದರೆ ರೈತರ ಪರವಾಗಿ ಉಗ್ರ ಹೋರಾಟ ನಡೆಸಲಾಗುವುದು.”
– ಪ್ರಕಾಶ್ ಆರ್., ತಾಲೂಕು ಅಧ್ಯಕ್ಷರು, ಕರುನಾಡ ವಿಜಯಸೇನೆ



