ಬೆಂಗಳೂರು: ದೆಹಲಿ ನಾಯಕತ್ವದ ಸೂಚನೆ ಮೇರೆಗೆ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಕಾರಣವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ನಿರ್ಧಾರ ಸಂಪೂರ್ಣವಾಗಿ ಪಕ್ಷದದ್ದು. ಪಕ್ಷದ ವರದಿ ಮತ್ತು ದೆಹಲಿ ನಾಯಕರ ಸಲಹೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಎಲ್ಲರೂ ಆರೋಪ ಮಾಡಬಹುದು, ಆದರೆ ಅದರಿಂದ ನನಗೆ ಯಾವುದೇ ಚಿಂತೆಯಿಲ್ಲ. ಪಕ್ಷದ ಶಿಸ್ತಿನಂತೆ ನಾವು ನಡೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಅಹಿಂದ ಸಮುದಾಯಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.
ಇದೇ ವೇಳೆ, ಪಕ್ಷದೊಳಗಿನ ಗುಂಪು ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಎಂಬುದೇ ಇಲ್ಲ. ನಾವು ಎಲ್ಲರೂ ಒಂದೇ ತಂಡ. 146 ಶಾಸಕರು ಒಂದೇ ಗುಂಪಿನವರು ಎಂದು ಹೇಳಿದರು.
ತಾವು ಮತ್ತು ಮುಖ್ಯಮಂತ್ರಿ ನಿರಂತರವಾಗಿ ಚರ್ಚೆ ನಡೆಸುತ್ತೇವೆ. ಪ್ರತ್ಯೇಕ ಗುಂಪುಗಳಿವೆ ಎಂಬುದು ಕೇವಲ ಕಲ್ಪನೆ. ಕಾಂಗ್ರೆಸ್ನಲ್ಲಿ ಒಂದೇ ಗುಂಪು ಇದೆ, ಅದು ಕಾಂಗ್ರೆಸ್ ಗುಂಪು ಮಾತ್ರ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.



