ಆನೇಕಲ್: ನಂಬಿದ ಸಂಬಂಧಿಕನೇ ಸಂಸಾರಕ್ಕೆ ಮುಳ್ಳಾದನಾ? ಹತ್ತು ವರ್ಷಗಳ ದಾಂಪತ್ಯ ಜೀವನಕ್ಕೆ ಮೂರನೇ ವ್ಯಕ್ತಿಯ ಪ್ರವೇಶವೇ ಮುಳುವಾಯ್ತಾ? ಪತ್ನಿಯ ಅನೈತಿಕ ಸಂಬಂಧ ಹಾಗೂ ಸಂಬಂಧಿಕನ ಕಿರುಕುಳದಿಂದ ಮನನೊಂದು ಆಟೋ ಚಾಲಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಮುನಿಕೃಷ್ಣ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಪತ್ನಿ ನಯನ ಹಾಗೂ ಸಂಬಂಧಿ ಕುಮಾರನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಮುನಿಕೃಷ್ಣ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಹತ್ತು ವರ್ಷಗಳ ಹಿಂದೆ ನಯನ ಎಂಬಾಕೆಯನ್ನು ಮದುವೆಯಾಗಿದ್ದ ಮುನಿಕೃಷ್ಣಗೆ ಆರು ವರ್ಷದ ಗಂಡು ಮಗುವಿದೆ. ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದ ಸಂಸಾರದಲ್ಲಿ ಸಂಬಂಧಿ ಕುಮಾರನ ಪ್ರವೇಶದಿಂದ ಬಿರುಗಾಳಿ ಎದ್ದಿದೆ ಎಂಬುದು ಕುಟುಂಬಸ್ಥರ ಆರೋಪ.
ಕ್ಯಾಬ್ ಚಾಲಕನಾಗಿದ್ದ ಕುಮಾರ, ನಯನಳನ್ನು ಪ್ರತಿದಿನ ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಸಂಬಂಧದಲ್ಲಿ ತಮ್ಮನಾಗಿದ್ದ ಕಾರಣ ಮನೆಯವರು ಕೂಡ ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ನಯನ ಹಾಗೂ ಕುಮಾರ ನಡುವೆ ವಿವಾಹೇತರ ಸಂಬಂಧವಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುನಿಕೃಷ್ಣ ಆಟೋ ಓಡಿಸಲು ಮನೆಯಿಂದ ಹೊರಡುತ್ತಿದ್ದಂತೆ ಕುಮಾರ ಮನೆಗೆ ಬರುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು ಮೂರು ತಿಂಗಳ ಹಿಂದೆ ನಯನ ಹಾಗೂ ಕುಮಾರನ ನಡುವಿನ ಸಂಬಂಧದ ವಿಚಾರ ಮುನಿಕೃಷ್ಣಗೆ ಗೊತ್ತಾಗಿತ್ತು. ಕುಮಾರನೇ ಮುನಿಕೃಷ್ಣಗೆ ವಾಟ್ಸಾಪ್ ಮೂಲಕ ನಯನ ಜೊತೆಗಿನ ಖಾಸಗಿ ಫೋಟೋಗಳು, ವಿಡಿಯೋಗಳು ಹಾಗೂ ಚಾಟಿಂಗ್ ಸಂದೇಶಗಳನ್ನು ಕಳುಹಿಸಿದ್ದ ಎಂಬ ಆರೋಪವಿದೆ. ಇದರಿಂದ ಆಘಾತಕ್ಕೊಳಗಾದ ಮುನಿಕೃಷ್ಣ ಪತ್ನಿಯನ್ನು ಪ್ರಶ್ನಿಸಿದ್ದು, ಇಬ್ಬರ ನಡುವೆ ತೀವ್ರ ಜಗಳ ನಡೆದಿತ್ತು. ಬಳಿಕ ನಯನ ತವರು ಮನೆ ಸೇರಿಕೊಂಡಿದ್ದರು.
ಆದರೆ ಇಲ್ಲಿಗೆ ಮುನಿಕೃಷ್ಣನ ಸಂಕಷ್ಟ ಮುಗಿದಿರಲಿಲ್ಲ. ಕುಮಾರ ರಸ್ತೆಯಲ್ಲಿ ಸಿಕ್ಕಾಗಲೆಲ್ಲ ಮುನಿಕೃಷ್ಣನನ್ನು ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ನಯನ ಗರ್ಭದಲ್ಲಿರುವ ಮಗು ತನ್ನದು ಎಂದು ಹೇಳುವ ಮೂಲಕ ಮುನಿಕೃಷ್ಣನಿಗೆ ಮತ್ತಷ್ಟು ನೋವುಂಟು ಮಾಡಿದ್ದ ಎಂಬ ಗಂಭೀರ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.
ಪತ್ನಿಯ ಸಂಬಂಧದ ವಿಚಾರ ಹಾಗೂ ನಿರಂತರ ಕಿರುಕುಳದಿಂದ ಮುನಿಕೃಷ್ಣ ತೀವ್ರವಾಗಿ ಮನನೊಂದಿದ್ದರು. ಆದರೆ ತಮ್ಮ ನೋವನ್ನು ಕುಟುಂಬಸ್ಥರ ಮುಂದಾಗಲಿ, ಗ್ರಾಮಸ್ಥರ ಮುಂದಾಗಲಿ ಹೇಳಿಕೊಂಡಿರಲಿಲ್ಲ. ಆತ್ಮಹತ್ಯೆಗೆ ಒಂದು ದಿನ ಮೊದಲು ತನ್ನ ಸಹೋದರನ ಬಳಿ ನಡೆದ ವಿಚಾರವನ್ನೆಲ್ಲ ಹಂಚಿಕೊಂಡಿದ್ದರು. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಿದ್ದಾರೆ.
ಆರಂಭದಲ್ಲಿ ಮುನಿಕೃಷ್ಣ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಅಂತ್ಯಕ್ರಿಯೆ ಮುಗಿದ ಬಳಿಕ ಮುನಿಕೃಷ್ಣ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದ ವಿಚಾರ ಬಹಿರಂಗವಾಗಿದೆ. ಇದರಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಸಾವಿಗೆ ಪತ್ನಿ ನಯನ ಹಾಗೂ ಕುಮಾರ ನೀಡಿದ ಮಾನಸಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ದೂರು ದಾಖಲಾದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುನಿಕೃಷ್ಣ ಸಾವಿಗೆ ಕಾರಣರಾದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಹತ್ತು ವರ್ಷಗಳ ದಾಂಪತ್ಯ ಜೀವನ, ಆರು ವರ್ಷದ ಮಗ ಹಾಗೂ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬದಲ್ಲಿ ಮುನಿಕೃಷ್ಣನ ಸಾವು ದುರಂತ ತಂದಿದೆ. ಪತ್ನಿ ಹಾಗೂ ಸಂಬಂಧಿಕನ ವಿರುದ್ಧ ಕುಟುಂಬಸ್ಥರು ಮಾಡಿರುವ ಗಂಭೀರ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.



