HomeKarnataka Newsಪಿಂಚಣಿ ಹಣವನ್ನೇ ನಂಬಿದ್ದ ವೃದ್ಧರಿಗೆ ಸಂಕಷ್ಟ: 6 ತಿಂಗಳಿಂದ ಖಾತೆಗೆ ಹಣವಿಲ್ಲ, ಸರ್ಕಾರದ ವಿರುದ್ಧ ಫಲಾನುಭವಿಗಳ...

ಪಿಂಚಣಿ ಹಣವನ್ನೇ ನಂಬಿದ್ದ ವೃದ್ಧರಿಗೆ ಸಂಕಷ್ಟ: 6 ತಿಂಗಳಿಂದ ಖಾತೆಗೆ ಹಣವಿಲ್ಲ, ಸರ್ಕಾರದ ವಿರುದ್ಧ ಫಲಾನುಭವಿಗಳ ಆಕ್ರೋಶ!

For Dai;y Updates Join Our whatsapp Group

ಬೆಂಗಳೂರು: ತಿಂಗಳು ತಿಂಗಳು ಬರುತ್ತಿದ್ದ ಪಿಂಚಣಿ ಹಣಕ್ಕೆ ಆರು ತಿಂಗಳಿಂದ ಬ್ರೇಕ್ ಬಿದ್ದಿದೆ. ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಬೇಕಾದ ಹಿರಿಯ ಜೀವಗಳು ಈಗ ಪಿಂಚಣಿ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಕೈಸೇರಿಲ್ಲ ಎಂದು ಫಲಾನುಭವಿಗಳು ಅಸಮಾಧಾನ ಹೊರಹಾಕಿದ್ದಾರೆ. ಪಿಂಚಣಿ ಹಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಡ ವೃದ್ಧರು ಹಾಗೂ ವಿಧವೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಯಸ್ಸಾದ ಕಾಲದಲ್ಲಿ ದುಡಿದು ತಿನ್ನುವ ಶಕ್ತಿಯಿಲ್ಲ. ಕೈಯಲ್ಲಿ ಹಣವಿಲ್ಲ, ಜೀವನ ನಿರ್ವಹಣೆಗೂ ದಾರಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೀಡುತ್ತಿದ್ದ ಅಲ್ಪ ಮೊತ್ತದ ಪಿಂಚಣಿಯೇ ಸಾವಿರಾರು ಹಿರಿಯ ಜೀವಗಳಿಗೆ ಆಸರೆಯಾಗಿತ್ತು. ಪ್ರತಿ ತಿಂಗಳು ಬರುತ್ತಿದ್ದ ಹಣದಲ್ಲಿ ಔಷಧಿ, ದಿನಸಿ ಹಾಗೂ ಇತರ ಅಗತ್ಯ ಖರ್ಚುಗಳನ್ನು ನಿಭಾಯಿಸುತ್ತಿದ್ದರು. ಆದರೆ, ಆರು ತಿಂಗಳಿಂದ ಪಿಂಚಣಿ ಹಣ ಬಾರದಿರುವುದು ಫಲಾನುಭವಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಇನ್ನು, ಪಿಂಚಣಿ ಹಣಕ್ಕಾಗಿ ವೃದ್ಧರು ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದಾರೆ. ಬ್ಯಾಂಕ್‌ಗೆ ಹೋದರೆ ಹಣ ಬಂದಿಲ್ಲ ಎಂಬ ಉತ್ತರ, ಅಂಚೆ ಕಚೇರಿಗೆ ಹೋದರೂ ಪಿಂಚಣಿಯ ಸುಳಿವಿಲ್ಲ. ಅಧಿಕಾರಿಗಳ ಬಳಿ ವಿಚಾರಿಸಿದರೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂಬುದು ಫಲಾನುಭವಿಗಳ ಅಳಲು. ಸರ್ಕಾರ ಯಾವಾಗ ಬಾಕಿ ಹಣ ಬಿಡುಗಡೆ ಮಾಡುತ್ತದೋ ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದೆಡೆ, ಪಿಂಚಣಿ ವಿಳಂಬದಿಂದ ವಿಧವೆಯರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬದ ಆರ್ಥಿಕ ಆಧಾರ ಕಳೆದುಕೊಂಡ ಅನೇಕ ಮಹಿಳೆಯರಿಗೆ ಸರ್ಕಾರ ನೀಡುವ ವಿಧವಾ ವೇತನವೇ ಜೀವನಾಧಾರವಾಗಿದೆ. ಆದರೆ, ತಿಂಗಳುಗಟ್ಟಲೆ ಹಣ ಬಾರದಿರುವುದರಿಂದ ಮನೆ ಖರ್ಚು ನಿಭಾಯಿಸುವುದೇ ಕಷ್ಟವಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಫಲಾನುಭವಿಗಳು ನೋವು ತೋಡಿಕೊಂಡಿದ್ದಾರೆ.

ಇನ್ನು, ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಿರುವ ಕೆಲ ಹಿರಿಯ ನಾಗರಿಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪ್ರತಿ ತಿಂಗಳು ಸರಿಯಾಗಿ ಪಿಂಚಣಿ ಹಣ ಬರುತ್ತಿತ್ತು. ಆದರೆ, ಈಗ ತಿಂಗಳುಗಳು ಕಳೆದರೂ ಹಣ ಖಾತೆಗೆ ಜಮೆಯಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಪಿಂಚಣಿ ಹಣವನ್ನೇ ನಂಬಿಕೊಂಡಿರುವ ಬಡವರ ಪರಿಸ್ಥಿತಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ಇದರ ನಡುವೆ ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಎದುರಾಗಿದೆಯಾ? ಆರ್ಥಿಕ ಸಂಕಷ್ಟದಿಂದಲೇ ಪಿಂಚಣಿ ಬಿಡುಗಡೆ ವಿಳಂಬವಾಗುತ್ತಿದೆಯಾ? ಅಥವಾ ತಾಂತ್ರಿಕ ಸಮಸ್ಯೆಯಿಂದ ಹಣ ಫಲಾನುಭವಿಗಳ ಖಾತೆ ಸೇರುತ್ತಿಲ್ಲವಾ ಎಂಬ ಪ್ರಶ್ನೆಗಳು ಎದುರಾಗಿವೆ. ಆದರೆ, ಪಿಂಚಣಿ ವಿಳಂಬಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ದೊರೆಯಬೇಕಿದೆ.

ಒಟ್ಟಿನಲ್ಲಿ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ವಿಳಂಬವಾಗಿರುವುದಾಗಿ ಫಲಾನುಭವಿಗಳು ವ್ಯಕ್ತಪಡಿಸಿರುವ ಅಳಲು ಗಂಭೀರವಾಗಿದೆ. ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಬದುಕಬೇಕಾದ ಹಿರಿಯ ಜೀವಗಳು ತಮ್ಮ ಹಕ್ಕಿನ ಹಣಕ್ಕಾಗಿ ಅಲೆಯುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಿ ಬಾಕಿ ಪಿಂಚಣಿ ಹಣ ಬಿಡುಗಡೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img