ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೂ ಎನ್‌ಟಿಆರ್ ಅವರ ಬಹುನಿರೀಕ್ಷಿತ ಸಿನಿಮಾ ‘ಡ್ರ್ಯಾಗನ್’ ದಿನದಿಂದ ದಿನಕ್ಕೆ ಭಾರೀ ಕುತೂಹಲ ಹುಟ್ಟಿಸುತ್ತಿದೆ. ಅಧಿಕೃತ ಹೆಸರು ಇನ್ನೂ ಘೋಷಣೆ ಆಗದಿದ್ದರೂ, ಚಿತ್ರದ ಪ್ರತಿಯೊಂದು ಅಪ್ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಇದೀಗ ಚಿತ್ರತಂಡಕ್ಕೆ ಹಿರಿಯ ನಟ ಪ್ರಕಾಶ್ ರಾಜ್ ಸೇರ್ಪಡೆಯಾಗಿರುವ ಸುದ್ದಿ ಸಿನಿಪ್ರಿಯರಲ್ಲಿ ಹೈಪ್ ಹೆಚ್ಚಿಸಿದೆ.
ಪ್ರಶಾಂತ್ ನೀಲ್ ಸಿನಿಮಾಗಳ ವಿಶೇಷತೆ ಎಂದರೆ ವಿಭಿನ್ನ ಭಾಷೆಗಳ ಕಲಾವಿದರ ಸಮಾಗಮ. ‘ಕೆಜಿಎಫ್’, ‘ಸಲಾರ್’ ಬಳಿಕ ಈಗ ಈ ಸಿನಿಮಾದಲ್ಲೂ ಕನ್ನಡದ ಪ್ರತಿಭೆಗಳಿಗೆ ವಿಶೇಷ ಅವಕಾಶ ಸಿಕ್ಕಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ಬಹುಭಾಷಾ ನಟನಾಗಿ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಕಾಶ್ ರಾಜ್, ಯಾವುದೇ ಪಾತ್ರವನ್ನೂ ತಮ್ಮ ಅಭಿನಯದಿಂದ ಜೀವಂತಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ‘ಕೆಜಿಎಫ್ 2’ ಬಳಿಕ ಮತ್ತೆ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿರುವುದು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.
ಜೂ ಎನ್‌ಟಿಆರ್ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ಈಗಾಗಲೇ ಹಲವು ಹಿಟ್ ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ‘ಟೆಂಪರ್’ ಸಿನಿಮಾದಲ್ಲಿನ ಇವರಿಬ್ಬರ ತೀವ್ರ ಸನ್ನಿವೇಶಗಳು ಇಂದಿಗೂ ಅಭಿಮಾನಿಗಳ ಫೇವರಿಟ್. ಇದೀಗ ‘ಡ್ರ್ಯಾಗನ್’ನಲ್ಲಿ ಈ ಜೋಡಿ ಮತ್ತೆ ಮುಖಾಮುಖಿಯಾಗಲಿದ್ದು, ಸಿನಿಮಾ ಭಾರೀ ಮಟ್ಟದಲ್ಲಿ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ.



