‘ಕೆಡಿ’ ಸಿನಿಮಾದ ‘ಸರ್ಸೆ ಸೆರಗು’ ಹಾಡಿನಿಂದ ಉಂಟಾಗಿದ್ದ ಭಾರೀ ವಿವಾದಕ್ಕೆ ಸಂಬಂಧಿಸಿ ನಟಿ ನೋರಾ ಫತೇಹಿ ಕೊನೆಗೂ ಮೌನ ಮುರಿದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಅವರು ಲಿಖಿತ ಕ್ಷಮೆ ಸಲ್ಲಿಸಿದ್ದು, ಸಮಾಜಮುಖಿ ಹೆಜ್ಜೆಯೊಂದನ್ನೂ ಘೋಷಿಸಿದ್ದಾರೆ.
ಹಿಂದಿಯಲ್ಲಿ ‘ಸರ್ಕೆ ಚುನರಿ’ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಈ ಹಾಡು ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿದೆ ಎಂಬ ಆರೋಪದಡಿ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಹಾಡಿನ ದೃಶ್ಯಗಳು ಮತ್ತು ಸಾಹಿತ್ಯದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿತ್ತು.
ಗುರುವಾರ ವಿಚಾರಣೆಗೆ ಹಾಜರಾದ ನೋರಾ ಫತೇಹಿ, ‘ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಆದರೆ ಕಲಾವಿದೆಯಾಗಿ ನನ್ನ ಜವಾಬ್ದಾರಿಯನ್ನು ಅರಿತು ಕ್ಷಮೆ ಕೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಅಲ್ಲದೆ, ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಮನೋಭಾವದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ನಟ ಸಂಜಯ್ ದತ್ ಕೂಡ ಕ್ಷಮೆಯಾಚಿಸಿ 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು.
ವಿವಾದ ತಾರಕ್ಕೇರಿದ ಬಳಿಕ ‘ಸರ್ಕೆ ಚುನರಿ’ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಬಿಡುಗಡೆಯಾಗಿರುವ ‘ಕೆಡಿ’ ಸಿನಿಮಾದಲ್ಲೂ ಆ ಹಾಡಿಗೆ ಜಾಗ ನೀಡಲಾಗಿಲ್ಲ.



