ನೆಲಮಂಗಲ: ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವಾನ್ವಿತ ಹುದ್ದೆ ಇದ್ದರೂ ದುರಾಸೆಗೆ ಬಿದ್ದು ಉದ್ಯಮಿಯೊಬ್ಬರಿಗೆ ₹2.66 ಕೋಟಿ ವಂಚನೆ ಮಾಡಿದ ಆ್ಯಕ್ಸಿಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸೇರಿ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ವಿನೋದ್ ಕುಮಾರ್, ಅರುಣ್ ಕುಮಾರ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.
ತನಿಖೆ ಪ್ರಕಾರ, ಪ್ರಮುಖ ಆರೋಪಿ ವಿನೋದ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯಲ್ಲೇ ದೊಡ್ಡ ಪ್ರಮಾಣದ ವಹಿವಾಟು ನಡೆಸುತ್ತಿದ್ದ ಸುಬ್ರಮಣಿ ಎಂಬ ಉದ್ಯಮಿಯನ್ನು ಗುರಿಯಾಗಿಸಿಕೊಂಡಿದ್ದ. ಟ್ರಾನ್ಸ್‌ಪೋರ್ಟ್ ಹಾಗೂ ಮ್ಯಾನ್‌ಪವರ್ ಏಜೆನ್ಸಿ ನಡೆಸುತ್ತಿದ್ದ ಸುಬ್ರಮಣಿ ಅವರ ಖಾತೆಯಲ್ಲಿ ತಿಂಗಳಿಗೆ ₹10 ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿತ್ತು. ಇದನ್ನೇ ಗಮನಿಸಿ ಆರೋಪಿ ವಂಚನೆಗೆ ಸಂಚು ರೂಪಿಸಿದ್ದಾನೆ.
ವಿನೋದ್ ಕುಮಾರ್ ಬೇರೆಯವರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದು, ಇಬ್ಬರು ಅಮಾಯಕ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ ಎನ್ನಲಾಗಿದೆ. ಬಳಿಕ ಉದ್ಯಮಿ ಸುಬ್ರಮಣಿ ಅವರಿಗೆ ವಾಟ್ಸಾಪ್ ಕರೆ ಮಾಡಿ, ತನ್ನ ಪ್ರಭಾವ ಬಳಸಿ ಸುಮಾರು ₹30 ಕೋಟಿ ಮೌಲ್ಯದ ಬಿಸಿನೆಸ್ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿದ್ದಾನೆ.
ಇದಕ್ಕೆ ಪ್ರತಿಯಾಗಿ ಒಪ್ಪಂದದ ಮೊತ್ತದಲ್ಲಿ ಶೇ.10ರಷ್ಟು ಕಮಿಷನ್ ನೀಡುವಂತೆ ಬೇಡಿಕೆ ಇಟ್ಟು, ಮುಂಗಡವಾಗಿ ₹2 ಕೋಟಿ 66 ಲಕ್ಷ ಹಣವನ್ನು ಆರ್‌ಟಿಜಿಎಸ್ (RTGS) ಮೂಲಕ ತಾನು ಸೃಷ್ಟಿಸಿದ್ದ ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ.
ಹಣ ಖಾತೆಗೆ ಜಮೆಯಾಗುತ್ತಿದ್ದಂತೆ ವಿನೋದ್ ಕುಮಾರ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅನುಮಾನಗೊಂಡ ಉದ್ಯಮಿ ಸುಬ್ರಮಣಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಮ್ಯಾನೇಜರ್‌ನಿಂದ ಸಮರ್ಪಕ ಉತ್ತರ ದೊರೆಯಲಿಲ್ಲ. ಇದರಿಂದ ತಮಗೆ ವಂಚನೆಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಕೇವಲ ಎರಡು ದಿನಗಳಲ್ಲೇ ಪ್ರಮುಖ ಆರೋಪಿ ವಿನೋದ್ ಕುಮಾರ್ ಹಾಗೂ ಆತನ ಸಹಚರರಾದ ಅರುಣ್ ಕುಮಾರ್ ಮತ್ತು ಕಿರಣ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಕಿರಣ್ ಪಿಗ್ಮಿ ಕಲೆಕ್ಟರ್ ಆಗಿದ್ದು, ವಂಚನೆಯ ಹಣವನ್ನು ನಗದು ರೂಪಕ್ಕೆ ಪರಿವರ್ತಿಸಲು ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ವಂಚನೆ ಜಾಲದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.



