ಚಿಕ್ಕಬಳ್ಳಾಪುರ: ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ವೋಲ್ವೋ ಬಸ್ ಭೀಕರ ಅಪಘಾತಕ್ಕೀಡಾಗಿ ಟೆಕ್ಕಿ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-44ರ ಅಗಲಗುರ್ಕಿ ಬಳಿ ಕಂಟೇನರ್ಗೆ ಬಸ್ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಬಸ್ನ ಮುಂಭಾಗ ಸಂಪೂರ್ಣ ಛಿದ್ರವಾಗಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಐಷಾರಾಮಿ ವೋಲ್ವೋ ಬಸ್, ಮಾರ್ಗಮಧ್ಯೆ ಮುಂದೆ ಚಲಿಸುತ್ತಿದ್ದ ಕಂಟೇನರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಬಸ್ನ ಮುಂಭಾಗದ ಬಾಗಿಲಿನ ಸಮೀಪ ಕುಳಿತಿದ್ದ ಅನಂತಪುರ ಜಿಲ್ಲೆಯ ಚಿಲ್ಲಮತ್ತೂರು ನಿವಾಸಿ ಕೌಸರ್ ತಾಜ್ (28) ಗಂಭೀರವಾಗಿ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಕ್ರೇನ್ ಬಳಸಿ ಬಸ್ನ ಮುಂಭಾಗವನ್ನು ತೆರವುಗೊಳಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ನಂತರ ಶವವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಮೃತ ಯುವತಿ ಕೊಡಿಕೊಂಡ ಚೆಕ್ಪೋಸ್ಟ್ ಬಳಿ ಬಸ್ ಹತ್ತಿದ್ದು, ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಬಸ್ನಲ್ಲಿ ಸುಮಾರು 40 ಪ್ರಯಾಣಿಕರಿದ್ದರೂ, ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಸ್ಥಳಕ್ಕೆ ಧಾವಿಸಿದ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿದರು.



