ಬೆಂಗಳೂರು: ದೇಶದ ಪ್ರತಿಷ್ಠಿತ ನಿರ್ವಹಣಾ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಎಂ ಬೆಂಗಳೂರು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪದವಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಿದೆ.
ಟಾಟಾ ಟ್ರಸ್ಟ್ಸ್‌ನ ಆರ್ಥಿಕ ಬೆಂಬಲದೊಂದಿಗೆ ಹೊಸ ಅಂಡರ್‌ಗ್ರಾಜುಯೇಟ್ ಶಾಲೆಯನ್ನು ಆರಂಭಿಸುತ್ತಿದ್ದು, 2026ರ ಆಗಸ್ಟ್‌ನಿಂದ ಮೊದಲ ಬ್ಯಾಚ್‌ಗೆ ಪ್ರವೇಶ ನೀಡಲಾಗುತ್ತದೆ.
ಇದುವರೆಗೆ ಎಂಬಿಎ, ಪಿಎಚ್‌ಡಿ ಹಾಗೂ ಉನ್ನತ ನಿರ್ವಹಣಾ ಶಿಕ್ಷಣ ಕೋರ್ಸ್‌ಗಳಿಗೆ ಸೀಮಿತವಾಗಿದ್ದ ಐಐಎಂ ಬೆಂಗಳೂರು, ಇದೀಗ 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ನಾಲ್ಕು ವರ್ಷದ ಪೂರ್ಣಾವಧಿ ವಸತಿ ಸಹಿತ ಪದವಿ ಕೋರ್ಸ್‌ಗಳನ್ನು ಪರಿಚಯಿಸಿದೆ.
ಸದ್ಯಕ್ಕೆ ಬಿಎಸ್‌ಸಿ ಎಕನಾಮಿಕ್ಸ್ (ಆನರ್ಸ್) ಹಾಗೂ ಬಿಎಸ್‌ಸಿ ಡಾಟಾ ಸೈನ್ಸ್ (ಆನರ್ಸ್) ಎಂಬ ಎರಡು ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಎಕನಾಮಿಕ್ಸ್ ಕೋರ್ಸ್‌ನಲ್ಲಿ ಡಾಟಾ ಸೈನ್ಸ್ ಮೈನರ್ ವಿಷಯವಾಗಿದ್ದರೆ, ಡಾಟಾ ಸೈನ್ಸ್ ಕೋರ್ಸ್‌ನಲ್ಲಿ ಎಕನಾಮಿಕ್ಸ್ ಮೈನರ್ ವಿಷಯವಾಗಿರಲಿದೆ. ಎರಡೂ ಕೋರ್ಸ್‌ಗಳಲ್ಲಿ ಡಾಟಾ ಸೈನ್ಸ್, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯಗಳ ಸಮನ್ವಯ ಇರಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಮೂರು ವರ್ಷಗಳ ಬಳಿಕ ಪದವಿ ಪ್ರಮಾಣಪತ್ರದೊಂದಿಗೆ ನಿರ್ಗಮಿಸಬಹುದಾಗಿದ್ದು, ನಾಲ್ಕು ವರ್ಷ ಪೂರ್ಣಗೊಳಿಸಿದವರಿಗೆ ಆನರ್ಸ್ ಪದವಿ ನೀಡಲಾಗುತ್ತದೆ.
ಈ ಹೊಸ ಶಾಲೆಯ ಸ್ಥಾಪನೆಗೆ ಟಾಟಾ ಟ್ರಸ್ಟ್ಸ್ ಮಹತ್ವದ ಧನಸಹಾಯ ನೀಡಿದ್ದು, ಐಐಎಂ ಬೆಂಗಳೂರಿನ ಸುವರ್ಣ ಮಹೋತ್ಸವ ನಿಧಿ ಸಂಗ್ರಹ ಅಭಿಯಾನದಲ್ಲಿ ಇದು ಅತಿದೊಡ್ಡ ಕೊಡುಗೆಯಾಗಿದೆ. ಈ ಯೋಜನೆಯು ಸಂಸ್ಥೆಯ ಶೈಕ್ಷಣಿಕ ವಿಸ್ತರಣೆಗೆ ಹೊಸ ಆಯಾಮ ನೀಡಲಿದೆ ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.
ಮೊದಲ ಬ್ಯಾಚ್‌ಗೆ ಕೇವಲ 120 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಹೊಸ ಪದವಿ ಶಾಲೆಯು ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂ ಬೆಂಗಳೂರಿನ ಮುಖ್ಯ ಕ್ಯಾಂಪಸ್‌ನಲ್ಲೇ ಕಾರ್ಯನಿರ್ವಹಿಸಲಿದೆ. ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಹಾಸ್ಟೆಲ್, ಪ್ರಯೋಗಾಲಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ಸಿದ್ಧತೆ ನಡೆಸಿದೆ.
ಈ ಕುರಿತು ಮಾತನಾಡಿದ ಐಐಎಂ ಬೆಂಗಳೂರು ನಿರ್ದೇಶಕ ಪ್ರೊ. ಹೃಷಿಕೇಶ್ ಟಿ. ಕೃಷ್ಣನ್, “ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಜಾಗತಿಕ ಸವಾಲುಗಳನ್ನು ಎದುರಿಸಬಲ್ಲ ಯುವ ನಾಯಕರನ್ನು ರೂಪಿಸುವುದು ನಮ್ಮ ಉದ್ದೇಶ” ಎಂದು ತಿಳಿಸಿದ್ದಾರೆ.
ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ, “ಒಂದು ಸಂಸ್ಥೆಯ ಆರಂಭಿಕ ಹಂತದಲ್ಲಿ ನೀಡುವ ಬೆಂಬಲವು ಅದರ ಭವಿಷ್ಯದ ಚಾರಿತ್ರ್ಯ ಮತ್ತು ಮಹತ್ವಾಕಾಂಕ್ಷೆಯನ್ನು ರೂಪಿಸುತ್ತದೆ. ಐಐಎಂ ಬೆಂಗಳೂರಿನ ಈ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ಹೆಮ್ಮೆ” ಎಂದು ಹೇಳಿದ್ದಾರೆ.
ಐಐಎಂ ಬೆಂಗಳೂರಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, “ಪದವಿಪೂರ್ವ ಹಂತದಲ್ಲೇ ಪ್ರತಿಭೆಗಳನ್ನು ಪೋಷಿಸುವ ಮೂಲಕ ದತ್ತಾಂಶ ಆಧಾರಿತ ಜಗತ್ತಿನ ಸವಾಲುಗಳಿಗೆ ಸಿದ್ಧವಾಗಿರುವ ಚಿಂತಕರನ್ನು ರೂಪಿಸುವ ಗುರಿ ಹೊಂದಿದ್ದೇವೆ” ಎಂದು ಹೇಳಿದ್ದಾರೆ.
ಪ್ರವೇಶ ಪರೀಕ್ಷೆ, ಅರ್ಜಿ ಸಲ್ಲಿಕೆ ಹಾಗೂ ಆಯ್ಕೆ ಪ್ರಕ್ರಿಯೆಯ ಕುರಿತ ಅಧಿಕೃತ ಮಾಹಿತಿಯನ್ನು ಶೀಘ್ರದಲ್ಲೇ ಐಐಎಂ ಬೆಂಗಳೂರಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.



