ಬೆಂಗಳೂರು: ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕರ್ನಾಟಕ ಭೇಟಿಯನ್ನು ಮುಂದೂಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ನಿರ್ಮಾಣವಾಗಿರುವ ಸೂಕ್ಷ್ಮ ಪರಿಸ್ಥಿತಿಯಲ್ಲಿ ಈ ಭೇಟಿ ಸೂಕ್ತವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಈ ವಾತಾವರಣದಲ್ಲಿ ವಿಜಯ್ ಅವರನ್ನು ಕರೆಸುವುದು ಸರಿಯಲ್ಲ. ನಾನು ಆಹ್ವಾನ ನೀಡುವುದು, ಕೆಲವರು ಪ್ರತಿಭಟನೆ ಅಥವಾ ಮುತ್ತಿಗೆ ಹಾಕುವುದು ಯಾವುದೇ ದೃಷ್ಟಿಯಿಂದಲೂ ಸಮಂಜಸವಲ್ಲ. ಈ ವಿಚಾರದಲ್ಲಿ ಕೆಲವರು ನಡೆದುಕೊಳ್ಳುತ್ತಿರುವ ರೀತಿ ನನಗೆ ಸಮಾಧಾನ ತರುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸ್ವತಃ ಕರ್ನಾಟಕಕ್ಕೆ ಬಂದು ಸೌಹಾರ್ದಯುತವಾಗಿ ಚರ್ಚೆ ನಡೆಸಲು ಆಸಕ್ತಿ ತೋರಿದ್ದರು ಎಂದು ತಿಳಿಸಿದ ಅವರು, ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೂ ಮಾತುಕತೆ ನಡೆಸಲು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ ಎಂದರು. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿ, ಆಗಸ್ಟ್ 3ರ ನಿಗದಿತ ಭೇಟಿಯನ್ನು ಮುಂದೂಡುವಂತೆ ವಿಜಯ್ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಿಡಬ್ಲ್ಯೂಎಂಎ 4.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿದೆ. ಆದರೆ ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.



