ಬೆಂಗಳೂರು: ಸಿನಿಮಾ ಕಾಲ್ಶೀಟ್ ವಿವಾದದಿಂದ ಆರಂಭವಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಮಾನನಷ್ಟ ಪ್ರಕರಣದಲ್ಲಿ ಇಂದು ನಟ ಸುದೀಪ್ ಮಹತ್ವದ ವಿಚಾರಣೆಗೆ ಹಾಜರಾಗಲಿದ್ದಾರೆ. ಬೆಂಗಳೂರಿನ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ನಿರ್ಮಾಪಕರ ಪರ ವಕೀಲರು ಸುದೀಪ್ ಅವರನ್ನು ಪ್ರಶ್ನಿಸಲಿದ್ದಾರೆ.
ನಟ ಸುದೀಪ್ ವಿರುದ್ಧ ನಿರ್ಮಾಪಕರಾದ ಎಂ.ಎನ್. ಕುಮಾರ್ ಹಾಗೂ ಎಂ.ಎನ್. ಸುರೇಶ್, ಸಿನಿಮಾ ಕಾಲ್ಶೀಟ್ ನೀಡುವುದಾಗಿ ಹೇಳಿ 9 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದರು. ಈ ಆರೋಪಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿವೆ ಎಂದು ಆರೋಪಿಸಿ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
2023ರಲ್ಲಿ ದಾಖಲಾಗಿದ್ದ ಈ ಪ್ರಕರಣ ಇದೀಗ ಸಾಕ್ಷ್ಯಾಧಾರಗಳ ಹಂತದಲ್ಲಿದ್ದು, ನ್ಯಾಯಾಲಯದಲ್ಲಿ ಪ್ರಮುಖ ದಾಖಲೆಗಳು ಮತ್ತು ಹೇಳಿಕೆಗಳ ಪರಿಶೀಲನೆ ನಡೆಯುತ್ತಿದೆ. ಈ ಹಿಂದೆ ಸುದೀಪ್ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಸಾಕ್ಷ್ಯವನ್ನು ನೀಡಿದ್ದರು.
ಇಂದಿನ ವಿಚಾರಣೆಯಲ್ಲಿ ನಡೆಯಲಿರುವ ಕ್ರಾಸ್ ಎಕ್ಸಾಮಿನೇಷನ್ ಪ್ರಕರಣದ ಮುಂದಿನ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದ್ದು, ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸುದೀಪ್ ಮತ್ತು ನಿರ್ಮಾಪಕರ ನಡುವಿನ ಬಹುಚರ್ಚಿತ ಕಾನೂನು ಹೋರಾಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.



