ರೇಷ್ಮೆ ಸೀರೆಗಳು ಮಹಿಳೆಯರ ಫ್ಯಾಷನ್ನಲ್ಲಿ ಸದಾ ವಿಶೇಷ ಸ್ಥಾನ ಪಡೆದಿವೆ.
ಕಾಲ ಬದಲಾಗಿದ್ರೂ, ಫ್ಯಾಷನ್ ಎಷ್ಟೇ ಹೊಸ ರೂಪ ಪಡೆದರೂ ರೇಷ್ಮೆ ಸೀರೆ ಮೇಲಿನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುವ ಈ ಸೀರೆಗಳು ಅತ್ಯಂತ ಸೂಕ್ಷ್ಮ ಬಟ್ಟೆಯಿಂದ ತಯಾರಾಗಿರುವುದರಿಂದ ಅವುಗಳನ್ನು ತೊಳೆಯುವುದು ತುಂಬಾ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.
ಡ್ರೈ ಕ್ಲೀನಿಂಗ್ ಮಾಡುವುದೂ ಕೆಲವೊಮ್ಮೆ ಕಷ್ಟಕರವಾಗುವ ಈ ರೇಷ್ಮೆ ಸೀರೆಗಳನ್ನು ಮನೆಯಲ್ಲಿಯೇ ಸರಳವಾಗಿ ಸ್ವಚ್ಛಗೊಳಿಸಬಹುದಾದ ಕೆಲವು ಸುರಕ್ಷಿತ ವಿಧಾನಗಳು ಇಲ್ಲಿವೆ.
ಮೊದಲು ಪ್ಯಾಚ್ ಟೆಸ್ಟ್ ಮುಖ್ಯ:
ಯಾವುದೇ ಕ್ಲೀನಿಂಗ್ ವಿಧಾನ ಬಳಸುವ ಮೊದಲು ಸೀರೆಯ ಸಣ್ಣ ಭಾಗದಲ್ಲಿ ಪರೀಕ್ಷೆ ಮಾಡಬೇಕು. ಸೀರೆಯ ಲೇಬಲ್ ಓದಿ ಯಾವ ವಸ್ತು ಬಳಸಬಾರದು ಎಂಬುದನ್ನು ಗಮನಿಸುವುದು ಮುಖ್ಯ. ಸೀರೆಯನ್ನು ಪ್ರತಿದಿನ ತೊಳೆಯುವ ಬದಲು ಕೆಲವು ಬಾರಿ ಉಟ್ಟ ನಂತರ ಮಾತ್ರ ತೊಳೆಯುವುದು ಉತ್ತಮ. ತೊಳೆಯುವ ನಂತರ ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು.
ಟಾಲ್ಕಮ್ ಪೌಡರ್ ಬಳಕೆ:
ರೇಷ್ಮೆ ಸೀರೆಯ ಮೇಲೆ ಎಣ್ಣೆ ಅಥವಾ ತುಪ್ಪ ಬಿದ್ದರೆ ನೀರು ಬಳಸಬೇಡಿ. ಬದಲಿಗೆ ಟಾಲ್ಕಮ್ ಪೌಡರ್ ಅಥವಾ ಕಾರ್ನ್ಸ್ಟಾರ್ಚ್ ಹಚ್ಚಿ 15–20 ನಿಮಿಷ ಬಿಡಿ. ಇದು ಎಣ್ಣೆಯನ್ನು ಹೀರಿಕೊಂಡು ನಂತರ ಮೃದುವಾಗಿ ಒರೆಸಿದರೆ ಕಲೆ ಹೋಗುತ್ತದೆ.
ಬೇಬಿ ಶಾಂಪೂ ವಿಧಾನ:
ಕಠಿಣ ಡಿಟರ್ಜೆಂಟ್ ಬಳಸುವುದು ರೇಷ್ಮೆಗೆ ಹಾನಿಕಾರಕ. ಸ್ವಲ್ಪ ಬೇಬಿ ಶಾಂಪೂವನ್ನು ನೀರಿನಲ್ಲಿ ಬೆರೆಸಿ ನೊರೆ ತಯಾರಿಸಿ, ಅದನ್ನು ಕಲೆ ಇರುವ ಭಾಗಕ್ಕೆ ನಿಧಾನವಾಗಿ ಹಚ್ಚಿ 10 ನಿಮಿಷ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ಅಡುಗೆ ಸೋಡಾ ಉಪಾಯ:
ಒಣ ಕಲೆಗಳಿಗೆ ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣ ಪೇಸ್ಟ್ ಮಾಡಿ 10–15 ನಿಮಿಷ ಹಚ್ಚಿ ಬಿಡಬಹುದು. ನಂತರ ನಿಧಾನವಾಗಿ ತೊಳೆಯುವುದರಿಂದ ಕಲೆ ಕಡಿಮೆಯಾಗುತ್ತದೆ.
ಬಿಳಿ ವಿನೆಗರ್ ಬಳಕೆ:
ಚಹಾ, ಕಾಫಿ ಅಥವಾ ಜ್ಯೂಸ್ ಕಲೆಗಳಿಗೆ ತಣ್ಣೀರಿನಲ್ಲಿ ಬಿಳಿ ವಿನೆಗರ್ ಮಿಶ್ರಣ ಮಾಡಿ ಹತ್ತಿಯಿಂದ ಸೌಮ್ಯವಾಗಿ ಒರೆಸಿದರೆ ಕಲೆ ಹೋಗುತ್ತದೆ.



