ರಾಯಚೂರು: ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧವಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಏಪ್ರಿಲ್ ಹಾಗೂ ಮೇ ತಿಂಗಳ ಮೊದಲ 20 ದಿನಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದು ಬಂದಿದೆ.
ಮಠದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಸೋಮವಾರ ರಾತ್ರಿ ಮುಕ್ತಾಯವಾಗಿದ್ದು, ಒಟ್ಟು ₹2,78,19,526 ರೂಪಾಯಿ ಸಂಗ್ರಹವಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಇದರಲ್ಲಿ ₹2,69,28,176 ನೋಟು ರೂಪದಲ್ಲಿದ್ದು, ₹8,91,350 ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ.
ಅದೇ ರೀತಿ ಭಕ್ತರು ಕಾಣಿಕೆ ರೂಪದಲ್ಲಿ 15.100 ಗ್ರಾಂ ಚಿನ್ನ ಹಾಗೂ 751 ಗ್ರಾಂ ಬೆಳ್ಳಿಯನ್ನು ಸಮರ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಭಕ್ತರು ಹಾಗೂ ಕರ ಸೇವಕರು ಭಾಗವಹಿಸಿದ್ದರು. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆ ಭಕ್ತರ ನಂಬಿಕೆ ಹಾಗೂ ಭಕ್ತಿಯ ಪ್ರತಿಬಿಂಬವಾಗಿದ್ದು, ಈ ಬಾರಿಯೂ ಭಾರೀ ಕಾಣಿಕೆ ದಾಖಲಾಗಿದೆ.



