ಬೆಂಗಳೂರು: ನಗರದಲ್ಲಿ ನಕಲಿ ನಾಗಸಾಧುಗಳ ವೇಷ ಧರಿಸಿ ಅಮಾಯಕ ಜನರನ್ನು ವಂಚಿಸಿ ಕಳ್ಳತನ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಆಶೀರ್ವಾದ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಎಗರಿಸಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್‌ಪಿಸಿ ಲೇಔಟ್ ನಿವಾಸಿ ಅರುಣ್ ಶ್ರೀಪಾದ್ ವಂಚನೆಗೆ ಒಳಗಾದವರಾಗಿದ್ದಾರೆ. ನಾಗಸಾಧುಗಳ ವೇಷದಲ್ಲಿದ್ದ ಕೆಲವರು ಅರುಣ್ ಶ್ರೀಪಾದ್ ಅವರ ಬಳಿ ಬಂದು ಕಾಶಿ ಹಾಗೂ ಗಂಗಾ ಸ್ನಾನದ ಮಹತ್ವದ ಕುರಿತು ಮಾತನಾಡುತ್ತಾ ಧಾರ್ಮಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಮಾತಿನ ಮೂಲಕ ಅವರ ವಿಶ್ವಾಸ ಗಳಿಸಿದ ಬಳಿಕ ಆಶೀರ್ವಾದ ಮಾಡುವುದಾಗಿ ಹೇಳಿ, ಅವರ ಕೈಯಲ್ಲಿದ್ದ ಉಂಗುರವನ್ನು ಚಾಣಾಕ್ಷತನದಿಂದ ಕಳವು ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ನಡೆದ ತಕ್ಷಣ ಅರುಣ್ ಶ್ರೀಪಾದ್ ಅವರಿಗೆ ಉಂಗುರ ಕಳುವಾಗಿರುವುದು ತಿಳಿದಿರಲಿಲ್ಲ. ಮನೆಗೆ ತಲುಪಿದ ಬಳಿಕ ಕೈಯಲ್ಲಿದ್ದ ಉಂಗುರ ಕಾಣಿಸದಿರುವುದನ್ನು ಗಮನಿಸಿ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಬಳಿಕ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.



