ಭುವನಗಿರಿ: ತೆಲಂಗಾಣದ ಅಲೆರ್ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ಚಾರ್ಮಿನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಆತಂಕ ಮೂಡಿಸಿದೆ.
ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದ ವೇಳೆ ಬೋಗಿಯೊಂದರಿಂದ ಹೊಗೆ ಹೊರಬಂದಿದ್ದು, ಪ್ರಯಾಣಿಕರು ಭೀತಿಯಿಂದ ಹೊರಗೆ ಓಡಿದ್ದಾರೆ.
ಆರಂಭಿಕ ಮಾಹಿತಿಯ ಪ್ರಕಾರ, ರೈಲಿನ ಎಸ್5 ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ರೈಲು ಅಲೆರ್ ನಿಲ್ದಾಣದ ವ್ಯಾಪ್ತಿಯಲ್ಲಿದ್ದಾಗಲೇ ಈ ಅವಘಡ ಸಂಭವಿಸಿದ್ದು, ತಕ್ಷಣವೇ ಎಚ್ಚೆತ್ತ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಬೋಗಿಯಲ್ಲಿದ್ದ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಕೆಳಗಿಳಿದಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲಕಾಲ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರೈಲ್ವೆ ಇಲಾಖೆಯ ತಾಂತ್ರಿಕ ತಂಡ ಬೋಗಿಯನ್ನು ಪರಿಶೀಲಿಸುತ್ತಿದ್ದು, ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



