ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ನಟಿ ರನ್ಯಾ ರಾವ್ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಸುಮಾರು ಒಂದು ವರ್ಷ ಹಿಂದೆ 102 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ರನ್ಯಾ ರಾವ್ ಬಂಧಿತರಾಗಿ ಜೈಲು ಸೇರಿದ್ದರು. ಬಳಿಕ ನ್ಯಾಯಾಲಯದಿಂದ ಜಾಮೀನು ಲಭಿಸಿದ್ದರೂ, ಕಾಫಿಪೋಸಾ ಕಾಯ್ದೆಯಡಿ ಬಂಧನ ಮುಂದುವರಿದ ಕಾರಣ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಕಾಫಿಪೋಸಾ ಕಾಯ್ದೆಯಡಿ ಸಾಮಾನ್ಯವಾಗಿ ಕಳ್ಳಸಾಗಣೆ ಆರೋಪಿಗಳಿಗೆ ಒಂದು ವರ್ಷದ ಬಂಧನ ವಿಧಿಸಲಾಗುತ್ತದೆ. ಅದರಂತೆ, ರನ್ಯಾ ರಾವ್ ವಿರುದ್ಧ ಜಾರಿಯಾಗಿದ್ದ ಅವಧಿ ಇಂದು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಕಾಫಿಪೋಸಾ ಅವಧಿ ಅಂತ್ಯಗೊಂಡಿರುವುದರಿಂದ ಇಂದು ಸಂಜೆ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.



