ಚೆನ್ನೈ: ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಬಿಡುಗಡೆಯ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದ ಪ್ರಕರಣದ ಹಿಂದಿನ ರಹಸ್ಯವನ್ನು ನಿರ್ದೇಶಕ ಎಚ್. ವಿನೋದ್ ಬಹಿರಂಗಪಡಿಸಿದ್ದಾರೆ. ಸಿನಿಮಾ ಸೋರಿಕೆಯ ಹಿಂದೆ ಯಾವುದೇ ರಾಜಕೀಯ ಅಥವಾ ಪ್ರಚಾರ ತಂತ್ರ ಇರಲಿಲ್ಲ; ಎಡಿಟಿಂಗ್ ರೂಂನಲ್ಲಿದ್ದ ಫ್ರೀಲ್ಯಾನ್ಸ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಅವರು ತಿಳಿಸಿದ್ದಾರೆ.
ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಸೆನ್ಸಾರ್ ವಿಳಂಬ, ಕಾನೂನು ಹೋರಾಟ ಹಾಗೂ ಎಚ್‌ಡಿ ಪ್ರಿಂಟ್ ಲೀಕ್‌ನಿಂದ ಭಾರೀ ಹಿನ್ನಡೆ ಅನುಭವಿಸಿತ್ತು. ಈ ನಡುವೆ ವಿಜಯ್ ಅವರೇ ಸಿನಿಮಾ ಲೀಕ್ ಮಾಡಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ ವಿನೋದ್, “ವಿಜಯ್ ಅವರ ಯಶಸ್ಸಿಗೆ ಸಿನಿಮಾ ಲೀಕ್ ಅಗತ್ಯವಿರಲಿಲ್ಲ. ಅವರಿಗೆ ಪ್ರೇಕ್ಷಕರ ಬೆಂಬಲವೇ ಸಾಕು” ಎಂದು ಆರೋಪಗಳನ್ನು ತಳ್ಳಿಹಾಕಿದರು.
ಲೀಕ್ ಆದ ದೃಶ್ಯಗಳಲ್ಲಿ ಎಡಿಟಿಂಗ್ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಎಡಿಟಿಂಗ್ ತಂಡದ ಎಲ್ಲ ಸದಸ್ಯರ ವಿಚಾರಣೆ ನಡೆಸಲಾಗಿತ್ತು. ಗೂಗಲ್ ಡ್ರೈವ್ ಮೂಲಕ ಯಾವುದೇ ಫೈಲ್ ವರ್ಗಾವಣೆಯಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗಿತ್ತು.
ಕೊನೆಗೆ ಫ್ರೀಲ್ಯಾನ್ಸ್ ಸಿಬ್ಬಂದಿಯೊಬ್ಬ ಎಡಿಟಿಂಗ್ ರೂಂನಿಂದ ದೃಶ್ಯಗಳನ್ನು ಕಾಪಿ ಮಾಡಿಕೊಂಡು ತನ್ನ ಸ್ನೇಹಿತರೊಂದಿಗೆ ವೀಕ್ಷಿಸಿದ್ದಾನೆ. ಅಲ್ಲಿಂದಲೇ ಸಿನಿಮಾ ಅನಧಿಕೃತವಾಗಿ ಹರಡಿ ಆನ್‌ಲೈನ್‌ಗೆ ಅಪ್‌ಲೋಡ್ ಆಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
“ನಾನು ಭೇಟಿಯಾದಾಗ ಆತ ಅಳುತ್ತಾ ಕ್ಷಮೆ ಕೇಳಿದ. ಆದರೆ ಆತನೇ ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೋ ಅಥವಾ ಇನ್ನಾರಾದರೂ ಇದರ ಹಿಂದೆ ಇದ್ದಾರೋ ಎಂಬುದು ಇನ್ನೂ ನಿಗೂಢವಾಗಿದೆ,” ಎಂದು ವಿನೋದ್ ತಿಳಿಸಿದ್ದಾರೆ.
ಎಲ್ಲ ವಿವಾದಗಳನ್ನು ಹಿಂದಿಕ್ಕಿರುವ ‘ಜನ ನಾಯಗನ್’ ಚಿತ್ರ ಜುಲೈ 23ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ವಿಜಯ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.



