ಹಾಸನ: ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತನೊಬ್ಬನನ್ನು ಬಲಿ ಪಡೆದಿದ್ದ ಕಾಡಾನೆಯನ್ನು 6 ಸಾಕಾನೆಗಳ ನೆರವಿನಿಂದ ಸೆರೆ ಹಿಡಿದಿದ್ದರೂ, ಬಳಿಕ ಅದು ತಪ್ಪಿಸಿಕೊಂಡ ಘಟನೆ ನಡೆದಿದೆ.
ಕೆರಗೋಡು ಗ್ರಾಮದ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ದೈತ್ಯಾಕಾರದ ಒಂಟಿ ಸಲಗವನ್ನು ಪತ್ತೆಹಚ್ಚಲಾಗಿತ್ತು. ನಂತರ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಕುಸಿಯುವಂತೆ ಮಾಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸುಗ್ರೀವ, ಧನಂಜಯ, ಅಯ್ಯಪ್ಪ, ಏಕಲವ್ಯ, ಶ್ರೀರಾಮ ಸೇರಿದಂತೆ ಆರು ಸಾಕಾನೆಗಳನ್ನು ಬಳಸಲಾಗಿತ್ತು.
ಆದರೆ ಆನೆ ಎಚ್ಚರವಾದ ನಂತರ ಕಾಲಿಗೆ ಹಾಗೂ ಕತ್ತಿಗೆ ಕಟ್ಟಿದ್ದ ಹಗ್ಗಗಳನ್ನು ಕಿತ್ತೆಸೆದು ಹಠಾತ್ ತಪ್ಪಿಸಿಕೊಂಡು ಕಾಡಿನತ್ತ ಓಡಿ ಹೋಗಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಆತಂಕಕ್ಕೀಡಾಗಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕಾಡಾನೆ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಾಕಾನೆಗಳ ತಂಡವನ್ನು ಕ್ಯಾಂಪ್‌ಗೆ ವಾಪಸ್ ಕರೆತರಲಾಗಿದೆ.
ಈ ಕಾಡಾನೆ ಏಪ್ರಿಲ್ 12ರಂದು ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತ ರಾಜಶೆಟ್ಟಿಯವರನ್ನು ದಾಳಿ ಮಾಡಿ ಬಲಿ ಪಡೆದಿತ್ತು. ಬಳಿಕ ಗ್ರಾಮಸ್ಥರು ಆನೆಯನ್ನು ಶೀಘ್ರ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.



