ಹಾಸನ: ತೀವ್ರ ಜ್ವರ ಹಾಗೂ ಜಾಂಡೀಸ್‌ನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಪ್ರೀತಿ (20) ಎಂದು ಗುರುತಿಸಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಲೋಕೇಶ್.ಟಿ.ಕೆ. ಮತ್ತು ಶೋಭಾ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ. ಪ್ರೀತಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ಓದುತ್ತಿದ್ದಳು ಎಂದು ತಿಳಿದುಬಂದಿದೆ.
ಕೆಲ ದಿನಗಳಿಂದ ತೀವ್ರ ಜ್ವರ ಹಾಗೂ ಜಾಂಡೀಸ್‌ನಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ವಿದ್ಯಾರ್ಥಿನಿಯ ಅಕಾಲಿಕ ನಿಧನದಿಂದ ಕಾಲೇಜು ಸಿಬ್ಬಂದಿ ಹಾಗೂ ಸಹಪಾಠಿಗಳು ಆಘಾತಕ್ಕೊಳಗಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.



