ಬೆಂಗಳೂರು: ನಗರದ ಏರ್ಪೋರ್ಟ್ ರಸ್ತೆಯ ಫ್ಲೈಓವರ್ ಮೇಲೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತದಲ್ಲಿ ಒಟ್ಟು ಆರು ವಾಹನಗಳು ಜಖಂಗೊಂಡಿದ್ದು, ಕೆಲಕಾಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಳೆದ ರಾತ್ರಿ ಸುಮಾರು 9 ಗಂಟೆ ವೇಳೆಗೆ ಏರ್ಪೋರ್ಟ್ ರಸ್ತೆಯ ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ವೇಳೆ ಮುಂದಿದ್ದ ವಾಹನ ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಹಿಂಬದಿಯಿಂದ ಬರುತ್ತಿದ್ದ ವಾಹನಗಳಿಗೆ ತಕ್ಷಣ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ.
ಸರಣಿ ಅಪಘಾತದ ಪರಿಣಾಮ ಒಂದು ಟಿಪ್ಪರ್, ನಾಲ್ಕು ಕಾರುಗಳು ಹಾಗೂ ಒಂದು ಟಿಟಿ ವಾಹನ ಜಖಂಗೊಂಡಿವೆ. ಡಿಕ್ಕಿಯ ರಭಸಕ್ಕೆ ವಾಹನಗಳಿಗೆ ಹಾನಿಯಾಗಿದ್ದು, ಘಟನೆಯಿಂದ ಫ್ಲೈಓವರ್ ಮೇಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಪಘಾತದಿಂದ ಏರ್ಪೋರ್ಟ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ವಿಷಯ ತಿಳಿಯುತ್ತಿದ್ದಂತೆ ಸಂಚಾರ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದರು.
ಪೊಲೀಸರು ಜಖಂಗೊಂಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ರಸ್ತೆಯಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳಿತು.
ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. ಮುಂದಿನ ವಾಹನ ಏಕಾಏಕಿ ಬ್ರೇಕ್ ಹಾಕಿದ್ದೇ ಸರಣಿ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಘಟನೆ ಕುರಿತು ಸಂಚಾರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



