ನವದೆಹಲಿ: ನಟ ದರ್ಶನ್ ತೂಗುದೀಪ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಜಾಮೀನು ಸಂಬಂಧದ ತಿದ್ದುಪಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯೇ ತಿರಸ್ಕರಿಸಿದ್ದು, ದರ್ಶನ್‌ಗೆ ಸದ್ಯ ಜೈಲಿನಿಂದ ಹೊರಬರುವ ದಾರಿ ಮತ್ತಷ್ಟು ಕಠಿಣವಾಗಿದೆ.
ಒಂದು ವರ್ಷದೊಳಗೆ ಜಾಮೀನು ಅರ್ಜಿ ಸಲ್ಲಿಸದಂತೆ ಈ ಹಿಂದೆ ನೀಡಿದ್ದ ಆದೇಶದಲ್ಲಿ ತುರ್ತು ಪರಿಸ್ಥಿತಿಗೆ ವಿನಾಯಿತಿ ನೀಡುವಂತೆ ದರ್ಶನ್ ಮನವಿ ಮಾಡಿದ್ದರು. ಆದರೆ, ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿ ರಿಜಿಸ್ಟ್ರಿ ನೇರವಾಗಿ ವಜಾಗೊಳಿಸಿದೆ.
ಈ ಹಿಂದೆ ವಿಚಾರಣೆ ನಡೆಸಿದ್ದ ಪರ್ದಿವಾಲಾ-ವಿಜಯ್ ಬಿಷ್ಣೋಯಿ ಪೀಠ, ಜೈಲಿನಲ್ಲಿರುವ ಕ್ವಾರಂಟೈನ್ ಸೆಲ್ ಕೂಡ ಜೈಲಿನ ಭಾಗವೇ ಎಂದು ಸ್ಪಷ್ಟಪಡಿಸಿ, ವಿಶೇಷ ಸೌಲಭ್ಯ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ಜೈಲು ಮ್ಯಾನ್ಯುಯಲ್ ಪ್ರಕಾರ ಅಗತ್ಯ ಸೌಲಭ್ಯಗಳನ್ನು ಮಾತ್ರ ನೀಡಲು ಸೂಚಿಸಿ, ಜಾಮೀನು ನಿರಾಕರಿಸಿತ್ತು.
ಈ ಬೆಳವಣಿಗೆಯಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಮತ್ತೊಂದು ಕಾನೂನು ಹಿನ್ನಡೆಯಾಗಿದ್ದು, ನ್ಯಾಯಾಲಯದ ಹಿಂದಿನ ಆದೇಶದಂತೆ ಮುಂದಿನ ವರ್ಷದ ಮೇ 15ರವರೆಗೆ ಜೈಲಿನಲ್ಲೇ ಉಳಿಯುವ ಪರಿಸ್ಥಿತಿ ಬಹುತೇಕ ಖಚಿತವಾಗಿದೆ.



