ಬೆಂಗಳೂರು: ದಿವಂಗತ ನಟ ದಿಲೀಪ್ ರಾಜ್ ಅಗಲಿಕೆಯ ನೋವು ಅವರ ಕುಟುಂಬವನ್ನು ಇನ್ನೂ ಕಾಡುತ್ತಿದೆ. ಪತಿಯ ನೆನಪಿನಲ್ಲಿ ದಿನ ಕಳೆಯುತ್ತಿರುವ ಪತ್ನಿ ಶ್ರೀವಿದ್ಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮತ್ತೊಂದು ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ.
25 ವರ್ಷಗಳ ಕಾಲ ಜೊತೆಯಾಗಿ ಬದುಕಿದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ದಂಪತಿ ಕಿರುತೆರೆ ಲೋಕದ ಆದರ್ಶ ಜೋಡಿಯಾಗಿದ್ದರು. ಪತಿಯ ಅಗಲಿಕೆಯ ಬಳಿಕ ಒಂದರ ಹಿಂದೆ ಒಂದರಂತೆ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಶ್ರೀವಿದ್ಯಾ, ಈ ಬಾರಿ ತಮ್ಮ ಮನದಾಳದ ನೋವನ್ನು ದೇವರನ್ನೇ ಪ್ರಶ್ನಿಸುವ ರೀತಿಯಲ್ಲಿ ಹೊರಹಾಕಿದ್ದಾರೆ.
“ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು. ಯಾಕೆಂದರೆ ದೇವರಿದ್ದಾನೆ. ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೋ, ಯಾರು ಖುಷಿಯಾಗಿ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಕಣ್ಣು ಇರುತ್ತದೆ” ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್ ನೋಡಿದ ಅಭಿಮಾನಿಗಳು ಭಾವುಕರಾಗಿದ್ದು, ಶ್ರೀವಿದ್ಯಾಗೆ ಸಾಂತ್ವನ ಹೇಳುತ್ತಿದ್ದಾರೆ. ಕೆಲವರು “ದಿಲೀಪ್ ರಾಜ್ ಅವರನ್ನು ಯಾರೂ ಮರೆತೇ ಮರೆತಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದೇ ವೇಳೆ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ದಿಲೀಪ್ ರಾಜ್ ಅಭಿನಯದ ವಿಡಿಯೋ ಹಂಚಿಕೊಂಡಿರುವ ಶ್ರೀವಿದ್ಯಾ, ಪತಿಯ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ಅವರ ನಗು ಮತ್ತು ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಭಿಮಾನಿಗಳು ಮತ್ತೆ ಕಣ್ಣೀರಾಗಿದ್ದಾರೆ.



