ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಮುಳಗುಂದ–ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ರಸ್ತೆಗಳಲ್ಲಿ ಸಂಚರಿಸುತ್ತಿರುವ ಭಾರೀ ಗಾತ್ರದ ವಿಂಡ್ ಮಿಲ್ ಉಪಕರಣ ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗದಗ ಜಿಲ್ಲಾ ಘಟಕವು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಗದಗ–ಮುಳಗುಂದ ರಸ್ತೆ ಇತ್ತೀಚೆಗೆ ಅಭಿವೃದ್ಧಿಗೊಂಡಿದ್ದು, ಲಕ್ಷ್ಮೇಶ್ವರವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಧ್ಯೆ ಭಾರೀ ಗಾತ್ರದ ವಿಂಡ್ ಮಿಲ್ ಕಂಬಗಳು ಹಾಗೂ ಬ್ಲೇಡ್ಗಳನ್ನು ಸಾಗಿಸುವ ವಾಹನಗಳ ಓಡಾಟದಿಂದ ರಸ್ತೆ ಹಾನಿಯಾಗುವುದರ ಜೊತೆಗೆ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಭಾರೀ ವಾಹನಗಳ ಸಂಚಾರದಿಂದ ರಸ್ತೆ ಮತ್ತಷ್ಟು ಹಾಳಾಗದಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಾನೂನುಬದ್ಧ ಕ್ರಮ ಕೈಗೊಂಡು ಈ ರಸ್ತೆಯಲ್ಲಿ ಅಂತಹ ವಾಹನಗಳ ಓಡಾಟಕ್ಕೆ ತಡೆ ವಿಧಿಸಬೇಕು ಎಂದು ಕರವೇ ಆಗ್ರಹಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾರುತಿ ಈಳಗೇರ, ಹನುಮಂತ ಪೂಜಾರ, ಬಸವರಾಜ ಮೇಟಿ, ಲಕ್ಷ್ಮೀ ಹಿತ್ತಲಮನಿ, ಹುಸೇನಸಾಬ ಕುಂಡಾಲಿ, ದಾವಲಸಾಬ ತಹಶೀಲ್ದಾರ, ರವಿ ಮಲ್ಲಾಡದ, ಮುಸ್ತಾಕ್ ದಾವಣಗೇರಿ, ಹುಸೇನ ಅಕ್ಕಿ, ರೂಪಾ ಅಬ್ಬಿಗೇರಿ, ಕಾಸೀಮಸಾಬ ವಾಲಿಕಾರ, ಇಸಾಕ್ ಅಹ್ಮದ್ ನದಾಫ್, ಸಿರಾಜ್ ಹೊಸಮನಿ, ಕು. ಎನ್. ರೇವಣ್ಣವರ, ಪ್ರಕಾಶ ಸೆಂದಿಖೇಡ, ಯೂನೂಸ್ ಗದಗ, ಪ್ರಶಾಂತ ನವಲಗುಂದ, ಶಂಭು ಹಿರೇಮಠ, ತೌಶೀಫ್ ಢಾಲಾಯತ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
“ಭಾರೀ ಗಾತ್ರದ ವಿಂಡ್ ವಾಹನಗಳ ಸಂಚಾರವನ್ನು ಕೂಡಲೇ ನಿಯಂತ್ರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಿ ಸಾವಿರಾರು ಕಾರ್ಯಕರ್ತರೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.”
– ಹನಮಂತಪ್ಪ ಎಚ್. ಅಬ್ಬಿಗೇರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ



