ಗುಜರಾತ್‌ನಲ್ಲಿ ಹಾಳಾದ ಹಾಗೂ ಹುಳು ಬಿದ್ದ ಮಾವಿನ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹೊರಗೆ ಸಿಗುವ ಜ್ಯೂಸ್‌ನ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಅಧಿಕಾರಿಗಳು ದೊಡ್ಡ ಪ್ರಮಾಣದ ಹಾಳಾದ ಹಣ್ಣುಗಳನ್ನು ವಶಪಡಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ತಜ್ಞರ ಪ್ರಕಾರ, ಸ್ವಲ್ಪ ಹಣ್ಣಾದ ಹಣ್ಣುಗಳು ಸಾಮಾನ್ಯವಾಗಿ ಅಪಾಯಕಾರಿಯಾಗದಿದ್ದರೂ, ಕೊಳೆತ ಅಥವಾ ಹುಳು ಬಿದ್ದ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಕೀಟಾಣುಗಳು ವೇಗವಾಗಿ ಬೆಳೆಯುವ ಸಾಧ್ಯತೆ ಇದೆ. ಇವುಗಳಿಂದ ತಯಾರಿಸಲಾದ ಜ್ಯೂಸ್ ಸೇವನೆಯಿಂದ ಹೊಟ್ಟೆನೋವು, ವಾಂತಿ, ಹೊಟ್ಟೆ ಉಬ್ಬರ, ಜ್ವರ ಹಾಗೂ ಫುಡ್ ಪಾಯ್ಸನಿಂಗ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಕೆಲ ಸಂದರ್ಭಗಳಲ್ಲಿ ಫಂಗಸ್‌ನಿಂದ ಉತ್ಪತ್ತಿಯಾಗುವ “ಮೈಕೋಟಾಕ್ಸಿನ್” ಎಂಬ ವಿಷಕಾರಿ ಅಂಶ ಯಕೃತ್ ಹಾಗೂ ಮೂತ್ರಪಿಂಡಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ರಾಸಾಯನಿಕ ಬಳಸಿ ಹಣ್ಣಾಗಿಸುವ ಹಣ್ಣುಗಳನ್ನೂ ಗುರುತಿಸುವುದು ಅಗತ್ಯವಾಗಿದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ. ಅಸಹಜ ಬಣ್ಣ, ಕಡಿಮೆ ರುಚಿ ಹಾಗೂ ನೀರಿನಲ್ಲಿ ತೇಲುವ ಗುಣ ಇಂತಹ ಲಕ್ಷಣಗಳು ಕಂಡುಬರಬಹುದು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜ್ಯೂಸ್ ಸೇವಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಸಾಧ್ಯವಾದಷ್ಟು ನಿಮ್ಮ ಎದುರಲ್ಲೇ ಹಣ್ಣು ಕತ್ತರಿಸಿ ಜ್ಯೂಸ್ ತಯಾರಿಸಿಕೊಳ್ಳುವುದು, ಮುಂಚಿತವಾಗಿ ತಯಾರಿಸಿದ ಪಲ್ಪ್ ಬಳಕೆಯನ್ನು ತಪ್ಪಿಸುವುದು ಹಾಗೂ ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸುವುದು ಸುರಕ್ಷಿತ ಎಂದು ತಜ್ಞರು ಸೂಚಿಸಿದ್ದಾರೆ.



