ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕರ್ನಾಟಕ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದ್ದು, ತಾಲೂಕಿನ ರೈತರು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ್ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ಅವರು ತಿಳಿಸಿರುವಂತೆ, ಪ್ರಕೃತಿ ವಿಕೋಪ, ಇಳುವರಿ ನಷ್ಟ, ಬಿತ್ತನೆ ವಿಳಂಬ, ಬೆಳವಣಿಗೆಯ ಹಂತದಲ್ಲಿ ಸಂಭವಿಸುವ ಹಾನಿ, ಕೊಯ್ಲಿನ ನಂತರದ ನಷ್ಟ ಹಾಗೂ ಸ್ಥಳೀಯ ವಿಪತ್ತುಗಳಿಂದಾಗುವ ಬೆಳೆ ಹಾನಿಗೆ ಆರ್ಥಿಕ ಪರಿಹಾರ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಈರುಳ್ಳಿ, ಕೆಂಪು ಮೆಣಸಿನಕಾಯಿ, ಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ, ರಾಗಿ ಹಾಗೂ ಸಜ್ಜಿ ಬೆಳೆಗಳನ್ನು ಬೆಳೆಯುವ ರೈತರು ಯೋಜನೆಯ ಸೌಲಭ್ಯ ಪಡೆಯಬಹುದು.
ರೈತರು ಅರ್ಜಿ ಸಲ್ಲಿಸುವಾಗ ತಮ್ಮ ಬೆಳೆ ಮಳೆಯಾಶ್ರಿತವೋ ಅಥವಾ ನೀರಾವರಿ ಬೆಳೆವೋ ಎಂಬುದನ್ನು ಸರಿಯಾಗಿ ನಮೂದಿಸಬೇಕು. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಅಧಿಸೂಚಿತ ಬೆಳೆಗಳಿಗೆ ಯೋಜನೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಕಾರ್ಡ್ ಹಾಗೂ ಬೆಳೆ ಸಾಲ ಪಡೆಯದಿರುವ ಕುರಿತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.



