ರಾಮನಗರ: ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿಯ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ.
ನೀರು ಕುಡಿಯಲು ನದಿಯತ್ತ ಬಂದ ಕಾಡಾನೆ, ಅಲ್ಲಿದ್ದ ಪ್ರವಾಸಿಗರನ್ನು ಕಂಡು ದಾಳಿ ನಡೆಸಿದಾಗ ಜನರು ಎದ್ನೋಬಿದ್ನೋ ಎಂದು ಓಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಬಳಿಕ ಕಾಡಿನೊಳಗೆ ಕಾಲ್ಕಿತ್ತಿದೆ.
ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



