ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣ ಬೆಳಕಿಗೆ ಬಂದಿದೆ.
ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಗ್ರಾಮದ ಕೆರೆಯಿಂದ ನೂರಾರು ಲೋಡ್‌ಗಳಷ್ಟು ಮಣ್ಣು ತೆಗೆದು ಮಾರಾಟ ಮಾಡಲಾಗುತ್ತಿದ್ದು, ಪರಿಸರ ಹಾನಿಯ ಆತಂಕ ಎದುರಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ‘PDOಗೆ ತಿಳಿಸಿದ್ದೇವೆ’ ಎಂದು ಹೇಳಲಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಹೇಳಿ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಆಡಳಿತದ ಗಮನಕ್ಕೆ ವಿಷಯ ತಂದರೂ ಯಾವುದೇ ಕ್ರಮವಾಗದಿರುವುದು ಪ್ರಶ್ನಾರ್ಥಕವಾಗಿದೆ. ವಿಲ್ಲೇಜ್ ಅಕೌಂಟೆಂಟ್ ಸಹ ಲಭ್ಯವಾಗದೇ ಇರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಅಕ್ರಮ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



