ಬೆಂಗಳೂರು ಗ್ರಾಮಾಂತರ: ಹೀರೋ ಸ್ಪ್ಲೆಂಡರ್ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮನನ್ನು ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ ಸುಮಾರು ₹20 ಲಕ್ಷ ಮೌಲ್ಯದ 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ನಿವಾಸಿ ಖಲೀಲ್ ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ತಿಂಗಳುಗಳಿಂದ ದೇವನಹಳ್ಳಿ, ಹೊಸಕೋಟೆ, ಶಿಡ್ಲಘಟ್ಟ ಹಾಗೂ ಮಾಲೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಎನ್ನಲಾಗಿದೆ. ವಿಶೇಷವಾಗಿ ಹೀರೋ ಸ್ಪ್ಲೆಂಡರ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದುದಾಗಿ ತನಿಖೆಯಿಂದ ಬಹಿರಂಗವಾಗಿದೆ.
ವಾಹನ ಕಳ್ಳತನದ ಬಗ್ಗೆ ಹಲವು ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಕಳವು ಪ್ರಕರಣಗಳ ಮಾಹಿತಿ ಬೆಳಕಿಗೆ ಬಂದಿದೆ.
ಆರೋಪಿ ಖಲೀಲ್ ಕಳವು ಮಾಡಿದ್ದ ಬೈಕ್‌ಗಳನ್ನು ಕೇವಲ ₹2,500ಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ನಂತರ ಅವುಗಳನ್ನು ಖರೀದಿಸುತ್ತಿದ್ದ ಕೆಲವರು ದಾಖಲೆಗಳಿಲ್ಲದೆ ಹೆಚ್ಚಿನ ಬೆಲೆಗೆ ಮರುಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಳವು ವಾಹನಗಳನ್ನು ಖರೀದಿಸಿದ್ದ ವ್ಯಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬಂಧಿತನಿಂದ ಒಟ್ಟು 42 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹20 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಾಹನಗಳಲ್ಲಿ ಬಹುತೇಕ ಬೈಕ್‌ಗಳು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಕಳುವಾಗಿದ್ದವು ಎಂದು ತಿಳಿದುಬಂದಿದೆ.
ಡಿವೈಎಸ್ಪಿ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ, ವಿಜಯಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪ್ರಶಂಸಿಸಿದ್ದಾರೆ.
ಇದೇ ವೇಳೆ, ವಶಪಡಿಸಿಕೊಂಡ ಬೈಕ್‌ಗಳನ್ನು ವಿಜಯಪುರ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಪಿ ಚಂದ್ರಕಾಂತ್ ಅವರು ನೈಜ ಮಾಲೀಕರಿಗೆ ಹಸ್ತಾಂತರಿಸಿದರು. ತಮ್ಮ ಕಳೆದುಹೋದ ವಾಹನಗಳು ಮರಳಿ ದೊರೆತ ಹಿನ್ನೆಲೆಯಲ್ಲಿ ಬೈಕ್ ಮಾಲೀಕರು ಪೊಲೀಸ್ ಇಲಾಖೆಯ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ವಾಹನ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಕಳವು ವಾಹನಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



