ಚಿಕ್ಕಬಳ್ಳಾಪುರ: ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಬೆಚ್ಚಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
28 ವರ್ಷದ ಯುವಕನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು ಸೇರಿದಂತೆ ಹಲವು ಲೋಹದ ವಸ್ತುಗಳು ಪತ್ತೆಯಾಗಿವೆ.
ಗುಡಿಬಂಡೆ ಪಟ್ಟಣದ ಬಾಪೂಜಿನಗರದಲ್ಲಿ ಮಹೇಶ್ ಎಂಬ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮಹೇಶ್, ಕಳೆದ ಕೆಲವು ದಿನಗಳಿಂದ ಅಕ್ಕನ ಮನೆಯಲ್ಲಿ ವಾಸವಾಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹೇಶ್ ನೇಣು ಬಿಗಿದುಕೊಂಡಿದ್ದರು ಎನ್ನಲಾಗಿದೆ. ಆದರೆ ಮೃತದೇಹ ನೆಲದ ಮೇಲೆ ಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇದು ಆತ್ಮಹತ್ಯೆಯೋ ಅಥವಾ ಸಾವಿನ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲು ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.
ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಕೀಗಳು!
ಮರಣೋತ್ತರ ಪರೀಕ್ಷೆ ವೇಳೆ ವೈದ್ಯರು ಮೃತನ ಹೊಟ್ಟೆಯನ್ನು ಪರಿಶೀಲಿಸಿದಾಗ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು, ಹೇರ್ಪಿನ್, ಔಷಧಿ ಟ್ಯೂಬ್ಗಳು ಹಾಗೂ ಕಬ್ಬಿಣದ ಚೂರುಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಇಷ್ಟೊಂದು ವಸ್ತುಗಳು ಯುವಕನ ಹೊಟ್ಟೆಯೊಳಗೆ ಹೇಗೆ ಸೇರಿದವು ಎಂಬುದು ಇದೀಗ ಪೊಲೀಸರ ತನಿಖೆಯ ಪ್ರಮುಖ ಅಂಶವಾಗಿದೆ. ಪತ್ತೆಯಾದ ವಸ್ತುಗಳನ್ನು ಹೊರತೆಗೆಯಲಾಗಿದೆ.
ಸಾಲದ ಸಮಸ್ಯೆ ಇತ್ತಾ?
ಮಹೇಶ್ಗೆ ಸಾಲದ ಸಮಸ್ಯೆ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಟುಂಬದವರು ಹೇಳಿದ್ದಾರೆ. ಆದರೆ ತಮ್ಮ ಎದುರು ಮಹೇಶ್ ಯಾವುದೇ ವಸ್ತುಗಳನ್ನು ನುಂಗಿರುವುದನ್ನು ನೋಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಸದ್ಯ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಹೇಶ್ ಸಾವಿನ ಹಿಂದೆ ಆತ್ಮಹತ್ಯೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ.



