ಗದಗ: ಜಿಲ್ಲೆಯ ರೈತರಿಗೆ ಬರ ಪರಿಹಾರ, ಗದಗ–ಬೆಟಗೇರಿ ಜನತೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿ GEN Z Voters and Citizens Forum, Gadag ವತಿಯಿಂದ ಆಗಸ್ಟ್ 31ರಂದು ಸೋಮವಾರ ಬೃಹತ್ ಶಾಂತಿಯುತ “ಗದಗದ ಹಕ್ಕಿಗಾಗಿ ಜನಪಾದಯಾತ್ರೆ” ಹಮ್ಮಿಕೊಳ್ಳಲಾಗಿದೆ.
ಸೋಮವಾರ ಬೆಳಿಗ್ಗೆ 10.30ಕ್ಕೆ ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾಗುವ ಪಾದಯಾತ್ರೆಯು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಲಿದೆ. ಜಿಲ್ಲೆಯ ರೈತರು, ಯುವಕರು, ಮಹಿಳೆಯರು ಹಾಗೂ ನಾಗರಿಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಜನಾಂದೋಲನಕ್ಕೆ ರೂಪ ನೀಡಲಾಗಿದೆ.
ಗದಗ ಜಿಲ್ಲೆಯ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ, ರೈತರ ಕೃಷಿ ಸಂಕಷ್ಟ ಹಾಗೂ ಯುವಕರ ನಿರುದ್ಯೋಗದಂತಹ ವಿಷಯಗಳು ಯಾವುದೇ ಒಂದು ವರ್ಗ ಅಥವಾ ಸಂಘಟನೆಗೆ ಸೀಮಿತವಾಗಿಲ್ಲ. ಪಕ್ಷ, ಜಾತಿ, ಧರ್ಮ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಗದಗದ ಜನರ ಸಾಮೂಹಿಕ ಹಕ್ಕಿನ ಹೋರಾಟವಾಗಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಯ ಕೊರತೆ ಹಾಗೂ ಕೃಷಿ ಸಂಕಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ವಾಸ್ತವ ಪರಿಸ್ಥಿತಿಯ ಸಮಗ್ರ ಸಮೀಕ್ಷೆ ನಡೆಸಿ ಅರ್ಹ ಪ್ರದೇಶಗಳಿಗೆ ಬರ ಪರಿಹಾರ ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ವಿಶೇಷ ನೆರವು ನೀಡಬೇಕು ಎಂದು ಆಗ್ರಹಿಸಲಾಗುವುದು.
ದಶಕಗಳಿಂದ ಗದಗ–ಬೆಟಗೇರಿ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರಗಳ ಬದಲಾಗಿ ವೈಜ್ಞಾನಿಕ ಹಾಗೂ ಶಾಶ್ವತ ನೀರು ಸರಬರಾಜು ಯೋಜನೆ ರೂಪಿಸಿ ಜಾರಿಗೊಳಿಸಬೇಕು ಎಂಬುದು ಜನಪಾದಯಾತ್ರೆಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.
ಅಲ್ಲದೆ, ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೇರೆ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಿಸಲು ಗದಗ ಜಿಲ್ಲೆಗೆ ಹೊಸ ಕೈಗಾರಿಕೆಗಳನ್ನು ಆಕರ್ಷಿಸುವ ವಿಶೇಷ ಯೋಜನೆ ರೂಪಿಸಬೇಕು. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಗುವುದು.
ಕಪ್ಪತಗುಡ್ಡ ಪ್ರದೇಶದಲ್ಲಿರುವ ಔಷಧೀಯ ಸಸ್ಯ ಸಂಪತ್ತಿನ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಆಯುರ್ವೇದ ಸಂಶೋಧನೆ ಹಾಗೂ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆಯನ್ನೂ ಸಂಘಟನೆ ಮುಂದಿಟ್ಟಿದೆ.
ಗ್ರಾಮೀಣ ಭಾಗದ ರೈತರಿಗೆ ನೀರಾವರಿ ಸೌಲಭ್ಯಗಳನ್ನು ವಿಸ್ತರಿಸುವುದರೊಂದಿಗೆ ಬಾಕಿ ಇರುವ ಹಾಗೂ ಅಗತ್ಯವಿರುವ ನೀರಾವರಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ರೈತರಿಗೆ ದೀರ್ಘಕಾಲೀನ ಕೃಷಿ ಭದ್ರತೆ ಕಲ್ಪಿಸಬೇಕು ಎಂದು ಪಾದಯಾತ್ರೆಯ ಮೂಲಕ ಸರ್ಕಾರವನ್ನು ಆಗ್ರಹಿಸಲಾಗುವುದು.
ಕಳೆದ ಹಲವು ದಿನಗಳಿಂದ ಗದಗ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು, ಮಹಿಳೆಯರು, ರೈತರು ಮತ್ತು ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರ ಸಹಿಯೊಂದಿಗೆ ಸಂಗ್ರಹಿಸಲಾದ ಮನವಿಯನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರುವ ಮಹತ್ವದ ಹೆಜ್ಜೆಯಾಗಿ ಜನಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಪಾದಯಾತ್ರೆಯ ಅಂತ್ಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲೆಯ ರೈತರು, ಯುವಕರು, ಮಹಿಳೆಯರು ಹಾಗೂ ನಾಗರಿಕರ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ವಿವರವಾದ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.
ಗದಗ ಜಿಲ್ಲೆಯ ರೈತ ಸಂಘಟನೆಗಳು, ಯುವ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವ್ಯಾಪಾರಸ್ಥರ ಸಂಘಗಳು, ಆಟೋ ಚಾಲಕರ ಸಂಘಗಳು, ವಕೀಲರ ಸಂಘಗಳು, ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
“ನಮ್ಮ ಹೋರಾಟ ವ್ಯಕ್ತಿಗಳ ವಿರುದ್ಧವಲ್ಲ, ಜನರ ಸಮಸ್ಯೆಗಳ ವಿರುದ್ಧ. ಅಧಿಕಾರಕ್ಕಾಗಿ ಅಲ್ಲ, ಜನರ ಹಕ್ಕಿಗಾಗಿ. ಪ್ರಚಾರಕ್ಕಾಗಿ ಅಲ್ಲ, ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ. ಪಕ್ಷಕ್ಕಿಂತ ಗದಗ ದೊಡ್ಡದು. ರಾಜಕೀಯಕ್ಕಿಂತ ಜನರ ಬದುಕು ದೊಡ್ಡದು. ಆದ್ದರಿಂದ ಗದಗದ ನ್ಯಾಯಸಮ್ಮತ ಹಕ್ಕುಗಳಿಗಾಗಿ ಎಲ್ಲರೂ ಒಂದಾಗಿ ಹೆಜ್ಜೆ ಹಾಕಬೇಕು” ಎಂದು GEN Z Voters and Citizens Forum, Gadag ಸಂಘಟಕರು ಕರೆ ನೀಡಿದ್ದಾರೆ.
“ಒಂದು ಹೆಜ್ಜೆ ಗದಗಕ್ಕಾಗಿ – ಒಂದು ಧ್ವನಿ ನ್ಯಾಯಕ್ಕಾಗಿ” ಎಂಬ ಘೋಷಣೆಯೊಂದಿಗೆ ಸೋಮವಾರ ನಡೆಯಲಿರುವ ಜನಪಾದಯಾತ್ರೆಯಲ್ಲಿ ಗದಗದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.



