HomeGadag Newsಗದಗ: ಹರಿಜಾತ್ರೋತ್ಸವ ಯಶಸ್ಸಿಗೆ ಶ್ರಮಿಸಿದ ಸೇವಕರಿಗೆ ಅದ್ದೂರಿ ಸನ್ಮಾನ!

ಗದಗ: ಹರಿಜಾತ್ರೋತ್ಸವ ಯಶಸ್ಸಿಗೆ ಶ್ರಮಿಸಿದ ಸೇವಕರಿಗೆ ಅದ್ದೂರಿ ಸನ್ಮಾನ!

For Dai;y Updates Join Our whatsapp Group

ಗದಗ: ಅವಳಿ ನಗರದ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವ ಕಾರ್ಯಕ್ರಮ ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ಸಂಭ್ರಮ-ಸಡಗರದಿಂದ ಜರುಗಿತು.

ಜಾತ್ರಾ ಮಹೋತ್ಸವದುದ್ದಕ್ಕೂ ಹಗಲು-ರಾತ್ರಿ ನಿರಂತರವಾಗಿ ಶ್ರಮಿಸಿ ಜಾತ್ರೆ ಯಶಸ್ವಿಯಾಗಲು ಕಾರಣರಾದ ದಾನಿಗಳು, ಶ್ರಮಿಕರು ಹಾಗೂ ಸೇವಕರನ್ನು ಜಾತ್ರಾ ಸಮಿತಿಯು ಸನ್ಮಾನಿಸಿ ಗೌರವಿಸಿತು.

ಓಕ್ಕಲಗೇರಿ ಓಣಿಯಲ್ಲಿರುವ ದ್ಯಾಮವ್ವನ ಕಟ್ಟಿಯ ಆವರಣದಲ್ಲಿ ಜಾತ್ರಾ ಸಮಿತಿಯಿಂದ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಚ್ಛತೆಯ ಮೂಲಕ ಒಂಬತ್ತು ದಿನಗಳ ಕಾಲ ಗ್ರಾಮ ದೇವತೆಯರ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಛಾಯಾಗ್ರಾಹಕರು, ಕೆ.ಇ.ಬಿ. ಸಿಬ್ಬಂದಿ, ಅಡುಗೆ ಭಟ್ಟರು ಹಾಗೂ ಅವರ ಸಹಾಯಕರು, ಪಾತ್ರೆ ಸ್ವಚ್ಛಗೊಳಿಸುವವರು, ಪ್ರಸಾದ ಉಣಬಡಿಸಿದವರು ಹಾಗೂ ತೆಂಗಿನಕಾಯಿ ಒಡೆಯುವವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಜಾತ್ರೆಯಲ್ಲಿ ಅವಿರತವಾಗಿ ದುಡಿದ ಗಂಜೀ ಬಸವೇಶ್ವರ ಮಿತ್ರ ಮಂಡಳಿಯ ಸದಸ್ಯರು, ದೇವಸ್ಥಾನದ ಅರ್ಚಕರು ಹಾಗೂ ಕಾರ್ಯಕರ್ತರಿಗೂ ಗೌರವ ಸಮರ್ಪಿಸಲಾಯಿತು. ಹರಿಜಾತ್ರೋತ್ಸವ ಕಮಿಟಿಯ ಈ ಕಾರ್ಯದಿಂದ ಭಕ್ತಿ-ಭಾವದಿಂದ ಸೇವೆ ಸಲ್ಲಿಸಿದವರೆಲ್ಲರೂ ಸಂತಸದಿಂದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಧನ ಸಹಾಯ ಮಾಡಿದವರ ಜೊತೆಗೆ ತನು-ಮನದಿಂದ ಜಾತ್ರೆಯಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದವರನ್ನೂ ಗುರುತಿಸಿ ಗೌರವಿಸಿರುವ ಕೀರ್ತಿ ಜಾತ್ರಾ ಕಮಿಟಿಯ ಸದಸ್ಯರಿಗೆ ಸಲ್ಲುತ್ತದೆ. ಜಾತ್ರೆಯ ಯಶಸ್ಸಿನ ಹಿಂದೆ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬರ ಸೇವೆಯನ್ನು ಸ್ಮರಿಸಿ ಗೌರವಿಸಿರುವುದು ವಿಶೇಷವಾಗಿತ್ತು.

ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಈ ಜಾತ್ರೆ ಪ್ರಸಕ್ತ ವರ್ಷ ಹದಿನೆಂಟು ವರ್ಷಗಳ ಬಳಿಕ ಅದ್ದೂರಿಯಾಗಿ ಜರುಗಿತು. ಭಕ್ತರು ನಿರೀಕ್ಷೆಗೂ ಮೀರಿ ತನು-ಮನ-ಧನದಿಂದ ಭಾಗಿಯಾಗಿ ನಾಡಿನಾದ್ಯಂತ ಗದಗ-ಬೆಟಗೇರಿಯ ಗ್ರಾಮ ದೇವತೆಯರ ಜಾತ್ರೆ ವಿಜೃಂಭಣೆಯಿಂದ ನಡೆಯಲು ಪ್ರಮುಖ ಕಾರಣರಾದರು.

ಉಡಿ ತುಂಬುವ ಕಾರ್ಯಕ್ರಮದಲ್ಲಂತೂ ಸಹಸ್ರಾರು ಸಂಖ್ಯೆಯಲ್ಲಿ ಮುತೈದೆಯರು ಭಾಗವಹಿಸಿದ್ದು ಜಾತ್ರೆಯ ಮತ್ತೊಂದು ವಿಶೇಷವಾಗಿತ್ತು. ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ವೈಭವದೊಂದಿಗೆ ನಡೆದ ಹರಿಜಾತ್ರೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ನಾಡಿನ ಗಮನ ಸೆಳೆದ ಭಂಡಾರ ಜಾತ್ರೆ:

2026ರ ಹರಿಜಾತ್ರೋತ್ಸವದಲ್ಲಿ ಈ ಬಾರಿ ಭಂಡಾರ ಜಾತ್ರೆ ನಾಡಿನ ಗಮನ ಸೆಳೆಯಿತು. ಭಕ್ತರು ನೀಡಿದ ಸುಮಾರು 17 ಟನ್‌ಗೂ ಅಧಿಕ ಭಂಡಾರದಲ್ಲಿ ಭಕ್ತರು ಮಿಂದೆದ್ದರು. ಪ್ರತಿ ಗಲ್ಲಿ-ಗಲ್ಲಿಗಳೂ ಹಳದಿ ಭಂಡಾರಮಯವಾಗಿದ್ದು, ಜಾತ್ರೆಯ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.

ಹೀಗೆ ಹತ್ತು-ಹಲವಾರು ಕಾರ್ಯಕ್ರಮಗಳ ಯಶಸ್ವಿಗಾಗಿ ಶ್ರಮಿಸಿದವರನ್ನು ಗುರುತಿಸಿ ಗೌರವಿಸಿರುವುದು ಜಾತ್ರೋತ್ಸವದ ಅವಿಸ್ಮರಣೀಯ ಕ್ಷಣವಾಗಿತ್ತು.

ಶ್ರೀಧರ ವಜ್ರಬಂಡಿ, ರಾಜು ಖಾನಪ್ಪನವರ, ವೀರಣ್ಣ ಮೇಟಿ, ಮಂಜು ಅಂತರಗೊಂಡ, ಚೇತನ್ ಅಬ್ಬಿಗೇರಿ, ಮಲ್ಲು ಮಹಾಂತಶೆಟ್ಟರ, ಮಂಜುನಾಥ ಕುರ್ತಕೋಟಿ, ಈಶ್ವರ ಹಳ್ಳಿ, ಕಿರಣ್ ಕಮತರ, ಪರಶುರಾಮ ಹಳ್ಳದ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ನಾಗರಾಜ ಮೇಣಸಗಿ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ ರೋಖಡೆ, ಸುರೇಶ ಹೆಬಸೂರ, ಪಂಚಾಕ್ಷರಿ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರು ತಮ್ಮ ಅಮೂಲ್ಯ ಸೇವೆ ಸಲ್ಲಿಸುವ ಮೂಲಕ ಜಾತ್ರೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಬಗ್ಗೆ ಜಾತ್ರಾ ಕಮಿಟಿ ಸಹ ಕಾರ್ಯದರ್ಶಿ ನವೀನ ನಾಲ್ವಾಡ ಮಾತನಾಡಿ, “ಹರಿಜಾತ್ರೋತ್ಸವದಲ್ಲಿ ಭಾಗವಹಿಸಿ ಗ್ರಾಮ ದೇವತೆಯರ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನಾಡಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ” ಎಂದು ಹೇಳಿದರು.

ಈ ಬಗ್ಗೆ ಜಾತ್ರಾ ಕಮಿಟಿಯ ಸಹ ಸಂಘಟನಾ ಕಾರ್ಯದರ್ಶಿ ಹೇಮಂತ ಗಿಡ್ಡಹನುಮಣ್ಣನವರ ಮಾತನಾಡಿ, “12 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜಾತ್ರೆ ಈ ವರ್ಷ 18 ವರ್ಷಗಳ ಬಳಿಕ ಸಂಪನ್ನವಾಗಿದೆ. ಹಿರಿಯರ ಮಾರ್ಗದರ್ಶನ ಹಾಗೂ ಭಕ್ತರ ಸಹಕಾರದೊಂದಿಗೆ ಜಾತ್ರೆ ಯಶಸ್ವಿಯಾಗಿದೆ. ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಜಾತ್ರೆ ಅದ್ದೂರಿಯಾಗಿ ನಡೆದಿರುವುದು ಮತ್ತೊಂದು ವಿಶೇಷ. ಮುಂಬರುವ ಜಾತ್ರೆ ಇನ್ನಷ್ಟು ಅದ್ದೂರಿಯಾಗಿ ನಡೆಯಲಿ” ಎಂದು ಹೇಳಿದರು.

ಈ ಬಗ್ಗೆ ಜಾತ್ರಾ ಕಮಿಟಿ ಸಹ ಕಾರ್ಯದರ್ಶಿ ಬಸವರಾಜ ಮಡಿವಾಳರ ಮಾತನಾಡಿ, “ಅವಳಿ ನಗರದ ಗ್ರಾಮ ದೇವತೆಯರ ಜಾತ್ರೆ ನಾಡಿನ ಹೆಸರಾಂತ ಜಾತ್ರೆಗಳಲ್ಲಿ ಒಂದಾಗಿದೆ. ಹಿಂದಿನ ಎಲ್ಲ ಜಾತ್ರೆಗಳಿಗಿಂತ ಈ ಬಾರಿಯ ಜಾತ್ರೆ ವಿಶಿಷ್ಟವಾಗಿ ಪೂರ್ಣಗೊಂಡಿದೆ. ಜಾತ್ರೆಯ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿತ್ತು. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ನಿರೀಕ್ಷೆಗೂ ಮೀರಿ ಜಾತ್ರೆ ಯಶಸ್ವಿಯಾಗಿದೆ” ಎಂದು ಹೇಳಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img