HomeGadag Newsಮುಂಡರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಾಲ್ವರು ಪಂಪ್‌ಸೆಟ್ ಕಳ್ಳರು ಬಲೆಗೆ! 9.30 ಲಕ್ಷ ರೂ. ಮೌಲ್ಯದ...

ಮುಂಡರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಾಲ್ವರು ಪಂಪ್‌ಸೆಟ್ ಕಳ್ಳರು ಬಲೆಗೆ! 9.30 ಲಕ್ಷ ರೂ. ಮೌಲ್ಯದ ಸೊತ್ತು ಪತ್ತೆ

For Dai;y Updates Join Our whatsapp Group

ಗದಗ: ರೈತರ ಜಮೀನುಗಳಲ್ಲಿ ಅಳವಡಿಸಿದ್ದ ನೀರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮರ ಜಾಲವನ್ನು ಮುಂಡರಗಿ ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಸುಮಾರು 9 ಲಕ್ಷ 30 ಸಾವಿರ ರೂ. ಮೌಲ್ಯದ 11 ನೀರೆತ್ತುವ ಮೋಟರ್ ಪಂಪ್‌ಸೆಟ್‌ಗಳು ಹಾಗೂ ಕಳ್ಳತನದ ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 13, 2026ರಂದು ಅಪರಾಧ ಸಂಖ್ಯೆ 167/2026, ಕಲಂ 303(2) ಬಿಎನ್‌ಎಸ್-2023ರಡಿ ಪ್ರಕರಣ ದಾಖಲಾಗಿತ್ತು. ರೈತರ ಜಮೀನುಗಳಿಂದ ನೀರೆತ್ತುವ ಮೋಟರ್ ಪಂಪ್‌ಸೆಟ್‌ಗಳು ಕಳ್ಳತನವಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಹಾಗೂ ಕಳುವಾಗಿದ್ದ ಸೊತ್ತುಗಳ ಪತ್ತೆಗೆ ವ್ಯಾಪಕ ತನಿಖೆ ಆರಂಭಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು ಕಳ್ಳತನ ಪ್ರಕರಣ ಭೇದಿಸಲು ವಿಶೇಷ ತಂಡವನ್ನು ರಚಿಸಿದ್ದರು.

ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಯ್ಯನಗೌಡ ಪಾಟೀಲ, ಸಬ್‌ಇನ್‌ಸ್ಪೆಕ್ಟರ್ ಬಿ.ಎನ್. ಯಳವತ್ತಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು.

ತನಿಖೆಯ ವೇಳೆ ಆಗಸ್ಟ್ 29ರಂದು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮರಿಯಪ್ಪ ಅಲಿಯಾಸ್ ಮುತ್ತು ತಂದೆ ದುರ್ಗೇಶ್ ಚವಡಾಳ (22), ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಗಾರೆ ಕೆಲಸಗಾರ ಮರಿಯಪ್ಪ ತಂದೆ ಹನುಮಂತಪ್ಪ ಚವಡಾಳ (20), ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಬೇಕರಿ ಕೆಲಸಗಾರ ವಿನಾಯಕ ತಂದೆ ಹಾಲಪ್ಪ ಮಡಿವಾಳರ (26) ಹಾಗೂ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದ ಬಾಂಡೆ ಸಾಮಾನು ವ್ಯಾಪಾರಿ ಪ್ರಕಾಶ ತಂದೆ ಈರಪ್ಪ ಕಾಕಡೆ (36) ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಮುಂಡರಗಿ ತಾಲೂಕಿನ ವಿಠಲಾಪೂರ ಗ್ರಾಮ ಹಾಗೂ ಶಿರಹಟ್ಟಿ ತಾಲೂಕಿನ ತೊಳಲಿ ಮತ್ತು ಹೊಳೆಇಟಗಿ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಅಳವಡಿಸಿದ್ದ ನೀರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ನಾಲ್ವರು ಆರೋಪಿಗಳು ಒಟ್ಟು 11 ನೀರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿಗಳಿಂದ ಸುಮಾರು 9 ಲಕ್ಷ 30 ಸಾವಿರ ರೂ. ಮೌಲ್ಯದ ಕಳವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳ್ಳತನದ ಕೃತ್ಯಕ್ಕೆ ಬಳಸಲಾಗಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ಸಹ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

ರೈತರ ಜಮೀನುಗಳಲ್ಲಿನ ಪಂಪ್‌ಸೆಟ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದ ಆರೋಪಿಗಳ ಜಾಲವನ್ನು ಭೇದಿಸುವಲ್ಲಿ ಮುಂಡರಗಿ ಪೊಲೀಸ್ ತಂಡ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಯ್ಯನಗೌಡ ಪಾಟೀಲ, ಸಬ್‌ಇನ್‌ಸ್ಪೆಕ್ಟರ್ ಬಿ.ಎನ್. ಯಳವತ್ತಿ, ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ್ ಬೂದಿಹಾಳ, ಮಂಜುನಾಥ ಅಗಸಿಮನಿ, ವಿರೇಶ ಮೂರಶಿಳ್ಳಿ, ಎಚ್.ಕೆ. ನದಾಫ್, ಆನಂದ ಲಮಾಣಿ, ಅಣ್ಣಪ್ಪ ಕವಲೂರ ಹಾಗೂ ನಾಗರಾಜ ಹರಪನಹಳ್ಳಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ರೈತರ ಪಂಪ್‌ಸೆಟ್‌ಗಳನ್ನೇ ಗುರಿಯಾಗಿಸಿಕೊಂಡು ನಡೆದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸಿ, ಕಳುವಾದ ಸೊತ್ತುಗಳ ಜತೆಗೆ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯವನ್ನು ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ಬಹುಮಾನವನ್ನೂ ಘೋಷಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img