ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ 30 ಕೆ.ಜಿ.ಗೂ ಅಧಿಕ ನಕಲಿ ನಾಟಿ ತುಪ್ಪವನ್ನು ವಶಕ್ಕೆ ಪಡೆದಿದ್ದಾರೆ.
ಮನೆಯೊಂದರಲ್ಲಿ ಡಾಲ್ಡಾ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ತುಪ್ಪ ತಯಾರಿಸಲಾಗುತ್ತಿತ್ತು ಎನ್ನುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಬಳಿಕ ಇದೇ ನಕಲಿ ತುಪ್ಪವನ್ನು ನಾಟಿ ತುಪ್ಪ ಎಂದು ಬಿಂಬಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಅಧಿಕಾರಿಗಳು ದಾಳಿ ನಡೆಸುವ ಮಾಹಿತಿ ತಿಳಿಯುತ್ತಿದ್ದಂತೆ ದಂಧೆಕೋರರು ಮನೆಯ ಬಾಗಿಲಿಗೆ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳು ಸ್ಥಳದಲ್ಲಿ ಸಿಗದೆ, ನಕಲಿ ತುಪ್ಪ ಹಾಗೂ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಳೆದ ವಾರವೂ ದಾಳಿ:
ಚಿಕ್ಕಮಗಳೂರು ನಗರದಲ್ಲಿ ನಕಲಿ ತುಪ್ಪದ ದಂಧೆ ವಿರುದ್ಧ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ವಾರವೂ ಪಾಳುಬಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿ ನಕಲಿ ತುಪ್ಪವನ್ನು ವಶಕ್ಕೆ ಪಡೆಯಲಾಗಿತ್ತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಳ್ಳಾರಿ ಮೂಲದ ಒಂದೇ ತಂಡ ನಿರಂತರವಾಗಿ ಚಿಕ್ಕಮಗಳೂರು ನಗರದಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ನಗರ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ದಂಧೆಯ ಹಿಂದೆ ಯಾರಿದ್ದಾರೆ, ನಕಲಿ ತುಪ್ಪವನ್ನು ಎಲ್ಲೆಲ್ಲಿ ಮಾರಾಟ ಮಾಡಲಾಗುತ್ತಿತ್ತು ಹಾಗೂ ಇದರಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ನಕಲಿ ತುಪ್ಪವನ್ನು ನಾಟಿ ತುಪ್ಪ ಎಂದು ಮಾರಾಟ ಮಾಡಲಾಗುತ್ತಿದ್ದು, ಈ ಮೂಲಕ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವ ತುಪ್ಪ ಹಾಗೂ ಇತರ ವಸ್ತುಗಳ ಮಾದರಿಗಳನ್ನು ಪರಿಶೀಲನೆಗೆ ಒಳಪಡಿಸುವ ಸಾಧ್ಯತೆಯಿದೆ.



